ಬೆಂಗಳೂರು:ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ವರ್ಷವಾಗುತ್ತ ಬಂದರೂ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿಲ್ಲ. ಸದಾ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಬರುತ್ತಿರುವ ಸಂಪುಟ ವಿಸ್ತರಣೆ ಪ್ರಹಸನವು ಈಗ ಮಹಾರಾಷ್ಟ್ರ ರಾಜಕೀಯ ವಿದ್ಯಮಾನದಿಂದ ಮತ್ತೆ ವಿಳಂಬವಾಗುವಂತಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಚನೆಯಾದ ನಂತರ, ಕಳೆದ 11 ತಿಂಗಳಿನಿಂದ ಹತ್ತಾರು ಬಾರಿ ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಕೈಯಲ್ಲಿಡಿದು ಹೋದ ಪುಟ್ಟ ಬಂದ ಪುಟ್ಟ ಎನ್ನುವಂತೆ ಬರಿಗೈಲಿ ವಾಪಸ್ ಬಂದಿದ್ದೇ ಆಗಿದೆ. ಸದಾ ಒಂದಿಲ್ಲೊಂದು ಕಾರಣಗಳು ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಗ್ರಹಣ ಹಿಡಿಯುವಂತೆ ಮಾಡಿವೆ.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಪರಿಣಾಮ: ಉಪ ಚುನಾವಣೆ, ಪರಿಷತ್ ಚುನಾವಣೆ, ದಸರಾ, ದೀಪಾವಳಿ, ಹೊಸ ವರ್ಷ, ಸಂಕ್ರಾಂತಿ, ಪಂಚರಾಜ್ಯ ಚುನಾವಣೆ, ಬಜೆಟ್, ಯುಗಾದಿ ಹೀಗೆ ಒಂದೊಂದು ಬಾರಿ ದೆಹಲಿಗೆ ಹೋದಾಗಲೂ ಒಂದೊಂದು ಕಾರಣಗಳೊಂದಿಗೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಲೇ ಬಂದಿದೆ. ಇದೀಗ ಪರಿಷತ್, ರಾಜ್ಯಸಭೆ ಚುನಾವಣೆ ಮುಗಿದು ಎಲ್ಲವೂ ಸರಿಯಾಗಿದೆ ಎನ್ನುತ್ತಿರುವಂತೆಯೇ ಮಹಾರಾಷ್ಟ್ರದಲ್ಲಿ ಕೆಲವು ರಾಜಕೀಯ ವಿದ್ಯಮಾನಗಳು ನಡೆದಿವೆ. ಇವು ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.
ಶಾ, ನಡ್ಡಾ ತಂತ್ರಗಾರಿಕೆ ರೂಪಿಸುವಲ್ಲಿ ಮಗ್ನ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದಾಗಿ ಮಹಾರಾಷ್ಟ್ರ ರಾಜಕೀಯ ವಿದ್ಯಮಾನಗಳ ವೀಕ್ಷಣೆ ಮಾಡುತ್ತಿದ್ದಾರೆ. ತಂತ್ರಗಾರಿಕೆ ರೂಪಿಸುವಲ್ಲಿ ಮಗ್ನರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಸಾಧ್ಯತೆ ಹಿನ್ನೆಲೆ ವರಿಷ್ಠರು ಅಲ್ಲಿನ ರಾಜಕೀಯ ಬೆಳವಣಿಗೆಗಳತ್ತ ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಸದ್ಯಕ್ಕೆ ಕರ್ನಾಟಕ ರಾಜಕೀಯ ವಿಚಾರದಲ್ಲಿ ಆಸಕ್ತಿ ತೋರುವ ಸಾಧ್ಯತೆ ಕಡಿಮೆ ಇದೆ.
ಸಂಪುಟ ವಿಸ್ತರಣೆ ಬಗ್ಗೆ ಉತ್ಸುಕತೆ ಕಡಿಮೆ: ಒಂದು ಕಡೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಾಧ್ಯತೆ, ಮತ್ತೊಂದು ಕಡೆ ರಾಷ್ಟ್ರಪತಿ ಚುನಾವಣೆ ಇದೆ. ಎನ್.ಡಿ.ಎ ಮೈತ್ರಿಕೂಟಕ್ಕೆ ಶೇ.48 ರಷ್ಟು ಮತಗಳಿದ್ದು, ಗೆಲ್ಲಲು ಅಲ್ಪ ಪ್ರಮಾಣದ ಮತಗಳ ಕೊರತೆ ಇದೆ. ಇದನ್ನು ಕ್ರೂಢೀಕರಿಸಿಕೊಳ್ಳುವ ನಿಟ್ಟಿನಲ್ಲಿ ವರಿಷ್ಠರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಉತ್ಸುಕತೆ ತೋರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗ್ತಿದೆ.
ಮಾತುಕತೆ ನಡೆಸಿ ಬಂದಿರುವ ಸಿಎಂ:ಈಗಾಗಲೇ ಸಾಕಷ್ಟು ಬಾರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿ ಬಂದಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನೂ ಕೊಟ್ಟು ಬಂದಿದ್ದಾರೆ. ರಾಜ್ಯ ಮಟ್ಟ ಮತ್ತು ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯೂ ನಡೆದಿದೆ. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿ ಕೋರ್ ಕಮಿಟಿ ಸಭೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿ ದೆಹಲಿಗೆ ತೆರಳಿ ತಿಳಿಸುವುದಾಗಿ ಹೇಳಿದ್ದರಾದರೂ ಅದು ಕಾರ್ಯಗತವಾಗಲಿಲ್ಲ. ಇತ್ತೀಚೆಗಷ್ಟೇ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದು, ಈ ವೇಳೆಯೂ ಅಂತಹ ಬೆಳವಣಿಗೆಗಳು ನಡೆಯಲಿಲ್ಲ.
ಹೈಕಮಾಂಡ್ ನಾಯಕರ ಬುಲಾವ್: ಈ ಎಲ್ಲಾ ವಿದ್ಯಮಾನಗಳ ಬಳಿಕ ಇದೀಗ ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದು, ಅದರಂತೆ ಬೊಮ್ಮಾಯಿಗೂ ಆಹ್ವಾನ ಬಂದಿದೆ. ಆದರೆ ಈ ಭೇಟಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಬೇಕು ಎನ್ನುವುದು ಸಿಎಂ ಬೊಮ್ಮಾಯಿ ಉದ್ದೇಶ.
ಇದನ್ನೂ ಓದಿ:ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ.. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ಇಲ್ಲ ಎಂದ ಸಿಎಂ
ಆದರೆ ಹೈಕಮಾಂಡ್ ನಾಯಕರ ಚಿತ್ತ ಮಹಾರಾಷ್ಟ್ರ ಮತ್ತು ರಾಷ್ಟ್ರಪತಿ ಚುನಾವಣೆ ಮೇಲೆ ಇರುವುದರಿಂದ ಈ ಬಾರಿಯೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಸಮ್ಮತಿ ನೀಡುವುದು ಅನುಮಾನವಾಗಿದೆ. ಆದರೂ ಬೊಮ್ಮಾಯಿ ಇಂದು ಮತ್ತು ನಾಳೆ ದೆಹಲಿ ಪ್ರವಾಸದಲ್ಲಿರಲಿದ್ದು, ಅವರ ಪ್ರಯತ್ನಕ್ಕೆ ಹೈಕಮಾಂಡ್ ಎಷ್ಟರಮಟ್ಟಿಗೆ ಮಣೆಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.