ಬೆಂಗಳೂರು:ರಾಜ್ಯ ಸರ್ಕಾರ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರು, ಸಿಬ್ಬಂದಿಗೆ ಜೂನ್ 13ರವರೆಗೆ ಕಚೇರಿ ಹಾಜರಾತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಸಚಿವಾಲಯದ ನೌಕರರಿಗೆ ಕಚೇರಿ ಹಾಜರಾತಿ ವಿನಾಯಿತಿ ಮುಂದುವರಿಕೆ - ನೌಕರರಿಗೆ ಕಚೇರಿ ಹಾಜರಾತಿ ವಿನಾಯಿತಿ
ರಾಜ್ಯದಲ್ಲಿ ಜೂನ್ 14ರ ಬೆಳಿಗ್ಗೆ 6 ಗಂಟೆಯವರಿಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರಿಗೆ ಜೂನ್ 13ರವರೆಗೆ ಕಚೇರಿ ಹಾಜರಾತಿಯಿಂದ ವಿನಾಯಿತಿಯನ್ನು ಮುಂದುವರೆಸಲಾಗಿದೆ.

ಈ ಕುರಿತಂತೆ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಮುಂದುವರೆದ ಹಿನ್ನೆಲೆಯಲ್ಲಿ ಸರ್ಕಾರ ಕಾಲ ಕಾಲಕ್ಕೆ ನೀಡಿರುವ ನಿರ್ದೇಶನಗಳ ಅನ್ವಯ ಸಚಿವಾಲಯದ ಅಧಿಕಾರಿ, ನೌಕರರಿಗೆ ಹಾಜರಾತಿಯಿಂದ ವಿನಾಯಿತಿಯನ್ನು ಜೂನ್ 6ರವರೆಗೆ ನೀಡಲಾಗಿತ್ತು. ಆದರೆ ಸರ್ಕಾರವು ಜೂನ್ 14ರ ಬೆಳಿಗ್ಗೆ 6 ಗಂಟೆಯವರಿಗೆ ಲಾಕ್ಡೌನ್ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರಿಗೆ ಜೂನ್ 13ರವರೆಗೆ ಕಚೇರಿ ಹಾಜರಾತಿಯಿಂದ ವಿನಾಯಿತಿಯನ್ನು ಮುಂದುವರೆಸಲಾಗಿದೆ ಎಂದು ಸುತ್ತೋಲೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು. ಸಂಬಂಧಪಟ್ಟ ಶಾಖೆಯ ಮೇಲಧಿಕಾರಿಗಳು ಇಚ್ಛಿಸಿದಲ್ಲಿ ಅಗತ್ಯ ಮತ್ತು ತುರ್ತು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆಯಾ ಅಧಿಕಾರಿ, ನೌಕರರು ಯಾವುದೇ ಕಾರಣ ನೀಡದೇ ಕಚೇರಿಗೆ ಕಡ್ಡಾಯವಾಗಿ ಹಾಜರಾಗುವಂತೆ ತಿಳಿಸಿದ್ದಾರೆ.