ಕರ್ನಾಟಕ

karnataka

ETV Bharat / state

ರಾಯಬಾಗ ಶಾಲೆಯ ಕೊಳವೆಬಾವಿಯಲ್ಲಿ ಕಲುಷಿತ ನೀರು: ಸರ್ಕಾರಕ್ಕೆ ಹೈಕೋರ್ಟ್​​ ನೋಟಿಸ್ - ಏಕೈಕ ನೀರಿನ ಮೂಲ

ಹುಬ್ಬಾರವಾಡಿ ಗ್ರಾಮದಲ್ಲಿ ಖಾಸಗಿ ಕಂಪನಿಯೊಂದರ ರಾಸಾಯನಿಕ ಗೊಬ್ಬರ ಸಂಗ್ರಹಣಗಾರದಿಂದಾಗಿ ಪ್ರಾಥಮಿಕ ಮತ್ತು ಅಂಗನವಾಡಿ ಕೇಂದ್ರದ ಕೊಳವೆಬಾವಿಯ ನೀರು ಕಲುಷಿತವಾಗಿದೆ. ಈ ಕುರಿತು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ​ ನೋಟಿಸ್ ಜಾರಿ ಮಾಡಿದೆ.

High court
ಹೈಕೋರ್ಟ್​

By ETV Bharat Karnataka Team

Published : Nov 22, 2023, 10:50 PM IST

ಬೆಂಗಳೂರು:ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬಾರವಾಡಿ ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದರ ರಾಸಾಯನಿಕ ಗೊಬ್ಬರ ಸಂಗ್ರಹಣಗಾರದಿಂದಾಗಿ ಪಕ್ಕದಲ್ಲಿರುವ ಪ್ರಾಥಮಿಕ ಮತ್ತು ಅಂಗನವಾಡಿ ಕೇಂದ್ರದ ಕೊಳವೆಬಾವಿಯ ನೀರು ಕಲುಷಿತಗೊಳ್ಳುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸ್ಥಳೀಯ ನಿವಾಸಿ ಪಾಂಡುರಂಗ ಮಹದೇವ ಕಾಂಬ್ಳೆ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನೋಟಿಸ್​ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಅಲ್ಲದೇ, ಇದೊಂದು ಸಾರ್ವಜನಿಕ ಮಹತ್ವದ ಗಂಭೀರ ವಿಚಾರವಾಗಿದೆ. ಅರ್ಜಿ ಸಂಬಂಧ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ, ರಾಯಬಾಗ ತಹಸೀಲ್ದಾರ್, ಚಿಕ್ಕೋಡಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಯಬಾಗ ಉಪವಿಭಾಗ, ರಾಯಬಾಗ ಸಿಡಿಪಿಒ, ರಾಯಬಾಗ ಬಿಇಒ, ಹುಬ್ಬಾರವಾಡಿ ಪಿಡಿಒ, ರಾಯಬಾಗ ತಾಪಂ ಇಒ, ಎಕ್ಸಿಕ್ಯೂಟಿಟ್ ಇಂಜಿನಿಯರ್ ಹೆಸ್ಕಾಂ ಮತ್ತು ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೋಟಿಸ್ ಜಾರಿಗೊಳಿಸಿದೆ. ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿ ರಾಸಾಯನಿಕ ಗೊಬ್ಬರ ಸಂಗ್ರಹಣಗಾರ (ಗೋದಾಮಿ) ಕಳೆದ ಏಳು ವರ್ಷಗಳಿಂದ ಹುಬ್ಬಾರವಾಡಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಗೋದಾಮಿನ ಕಾಂಪೌಂಡ್‌ಗೆ ಹೊಂದಿಕೊಂಡು ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇದೆ. ಇದರಲ್ಲಿ 500 ಮಕ್ಕಳು ಕಲಿಯುತ್ತಿದ್ದಾರೆ. ಗೋದಾಮಿನ ಹತ್ತಿರ ಸಾರ್ವಜನಿಕ ಬೋರ್‌ವೆಲ್ ಇದೆ. ಹುಬ್ಬಾರವಾಡಿ ಗ್ರಾಮ ಮತ್ತು ಶಾಲೆಗೆ ಅದು ಏಕೈಕ ನೀರಿನ ಮೂಲವಾಗಿದೆ.

ಗೋದಾಮಿಗೆ ನಿತ್ಯ 40ರಿಂದ 50 ಸರಕು ವಾಹನಗಳು ಬಂದು ಹೋಗುತ್ತವೆ. ಗೋದಾಮಿನ ಆವರಣದಲ್ಲಿ ರಾಸಾಯನಿಕಗಳು ಚೆಲ್ಲುವುದರಿಂದ ಗೋದಾಮಿನಲ್ಲಿ ಬಳಸುವ ಮತ್ತು ಲಾರಿ ಚಾಲಕರು ಸ್ನಾನ ಮಾಡುವ ನೀರಿನೊಂದಿಗೆ ಆ ರಾಸಾಯನಿಕ ಕೊಳವೆಬಾವಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಈ ಸಂಬಂಧ ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ನ್ಯಾಯಪೀಠಕ್ಕೆ ವಿವರಿಸಿದರು.

ಗೋದಾಮು ಸ್ಥಳಾಂತರಿಸಲು ಅರ್ಜಿದಾರರು ನೀಡಿರುವ ಮನವಿ, ನೀರು ಕಲುಷಿತಗೊಳ್ಳುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಿ ಶಾಲಾ ಮುಖ್ಯೋಪಾಧ್ಯಯರು ಸಲ್ಲಿಸಿರುವ ಹಲವು ಮನವಿಗಳನ್ನು ಪರಿಗಣಿಸುವಂತೆ ಹಾಗೂ ಗ್ರಾಮಸ್ಥರು ಸಲ್ಲಿಸಿರುವ ಮನವಿಗಳನ್ನು ಸ್ಥಳೀಯ ಪಂಚಾಯಿತಿ ಪಿಡಿಒ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದು ಅದರಂತೆ ಕ್ರಮ ಜರುಗಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆ ಮುಗಿಯುವ ತನಕ ಗೋದಾಮಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಿದ್ದರು.

ಇದನ್ನೂಓದಿ:ಭದ್ರತೆಯ ಉದ್ಯೋಗ ಮೌಲ್ಯಯುತ ಆಸ್ತಿ ಇದ್ದಂತೆ, ಹುದ್ದೆಗಾಗಿ ಸುಳ್ಳು ಹೇಳುವುದು ವಂಚನೆಗೆ ಸಮಾನ: ಹೈಕೋರ್ಟ್

ABOUT THE AUTHOR

...view details