ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೂ ಗೃಹ ಬಳಕೆಯ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ವಾರ್ಷಿಕ ಬಳಕೆಯ ಅಂದಾಜಿನಲ್ಲಿ ಸರಾಸರಿ ಯೂನಿಟ್ ನಿಗದಿಪಡಿಸಿದ್ದು, ಅದನ್ನು ಮೀರಿ ಬಳಸಿದ ಯೂನಿಟ್ಗಳಿಗೆ ಮಾತ್ರ ಬಿಲ್ ಪಾವತಿ ಮಾಡಬೇಕಿದೆ. ಆದರೂ ಯೋಜನೆ ಜಾರಿಗೂ ಮೊದಲಿನವರೆಗೆ ಉಳಿಸಿಕೊಂಡಿರುವ ಬಾಕಿ ಪಾವತಿ ಮಾಡಲು ಗ್ರಾಹಕರು ಮುಂದಾಗುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಗ್ರಾಹಕರು ಸಂಪೂರ್ಣ ಬಾಕಿ ವಿದ್ಯುತ್ ಮೊತ್ತವನ್ನು ಪಾವತಿ ಮಾಡಿಲ್ಲ. ಗೃಹ ಬಳಕೆ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು 2023ರ ಜೂನ್ 30ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಶುಲ್ಕದ ಮೊತ್ತವನ್ನು ಪಾವತಿಸಲು 2023ರ ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೂ ಗ್ರಾಹಕರು ಬಾಕಿ ಪಾವತಿಗೆ ಆಸಕ್ತಿ ತೋರಿಲ್ಲ. ಇರುವ ಬಾಕಿಯನ್ನು ಹಾಗೆಯೇ ಇರಿಸಿಕೊಂಡಿದ್ದು, ಉಚಿತ ವಿದ್ಯುತ್ ನ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಉಚಿತ ಯೋಜನೆಗೆ ಹಳೆ ಬಾಕಿ ಪಾವತಿ ಕಡ್ಡಾಯ ಮಾಡದೇ ಇರುವ ಕಾರಣದಿಂದಾಗಿ ಗೃಹಜ್ಯೋತಿ ಯೋಜನೆ ಪಡೆದರೂ ಹಳೆ ಬಾಕಿ ಪಾವತಿಗೆ ಗ್ರಾಹಕರು ಮುಂದಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಬಾಕಿ ವಿವರ : ಬೆಸ್ಕಾಂನ ವ್ಯಾಪ್ತಿಯಲ್ಲಿ 14,66,017 ಗೃಹ ಬಳಕೆಯ ಗ್ರಾಹಕರು 397.89 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದಾರೆ. ಅದೇ ರೀತಿ ಮೆಸ್ಕಾಂ ವ್ಯಾಪ್ತಿಯಲ್ಲಿ 4,39,887 ಗೃಹ ಬಳಕೆಯ ಗ್ರಾಹಕರು 62.88 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದಾರೆ. ಸೆಸ್ಕ್ ವ್ಯಾಪ್ತಿಯಲ್ಲಿ 12,57,192 ಗೃಹ ಬಳಕೆಯ ಗ್ರಾಹಕರು 306.93 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ 10,52,675 ಗೃಹ ಬಳಕೆಯ ಗ್ರಾಹಕರು 196.09 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದಾರೆ. ಜೆಸ್ಕಾಂ ವ್ಯಾಪ್ತಿಯಲ್ಲಿ 26,80,139 ಗೃಹ ಬಳಕೆಯ ಗ್ರಾಹಕರು 507.68 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟಾರೆ ಎಲ್ಲಾ ಎಸ್ಕಾಂಗಳಿಂದ 68,95,910 ಗೃಹ ಬಳಕೆಯ ಗ್ರಾಹಕರು 1,471.47 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಸದ್ಯ ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬಾಕಿ ಹಣ ಬಂದರೆ ಸ್ವಲ್ಪ ಚೇತರಿಕೆ ಕಾಣಲಿವೆ. ಅದಕ್ಕಾಗಿ ಬಾಕಿ ವಸೂಲಿಗೆ ಸಾಕಷ್ಟು ಪ್ರಯಾಸ ಪಡಲಾಗುತ್ತಿದೆ. ಸದ್ಯ ಉಚಿತ ವಿದ್ಯುತ್ ಬಿಲ್ ಸರ್ಕಾರದಿಂದ ಪಾವತಿಯಾಗುತ್ತಿದ್ದು, ಹೆಚ್ಚುವರಿ ಬಳಕೆಯ ವಿದ್ಯುತ್ ಬಿಲ್ ಮಾತ್ರ ಗ್ರಾಹಕರು ಪಾವತಿಸುತ್ತಿದ್ದಾರೆ. ಯೋಜನೆ ಜಾರಿಯಾದ ನಂತರ ಬಾಕಿ ಉಳಿಸಿಕೊಂಡರೆ ವಿದ್ಯುತ್ ಕಡಿತ ಮಾಡಬಹುದಾಗಿದೆ. ಆದರೆ, ಈಗಿನ ಹಣ ಪಾವತಿಸುತ್ತಿದ್ದು, ಹಳೆಯ ಬಾಕಿ ಮಾತ್ರ ಹಾಗೆಯೇ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೊರೆಯಾಗುತ್ತಿದೆ.