ಕರ್ನಾಟಕ

karnataka

ETV Bharat / state

ಮದುಮಗನಿಗೆ ತಲುಪಿಸಬೇಕಾದ ಸೂಟ್​​​​​ ಕಳೆದ ಕೊರಿಯರ್ ಕಂಪನಿಗೆ ಕೋರ್ಟ್​ ದಂಡ ​ - etv bharat kannada

ವಿವಾಹದ ದಿನದಂದು ವರ ಧರಿಸಬೇಕಾಗಿದ್ದ ಬಟ್ಟೆ ಕಳೆದುಹೋಗಲು ಕಾರಣವಾಗಿದ್ದ ಕೊರಿಯರ್ ಕಂಪನಿಗೆ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.

consumer-court-slaps-fine-to-courier-company-for-negligence
ಮದುಮಗನಿಗೆ ತಲುಪಿಸಬೇಕಾದ ಸೂಟ್​​​​​ ಕಳೆದ ಕೊರಿಯರ್ ಕಂಪನಿಗೆ ಕೋರ್ಟ್​ ದಂಡ ​

By

Published : Oct 1, 2022, 10:50 PM IST

ಬೆಂಗಳೂರು:ವಿವಾಹದ ದಿನದಂದು ವರ ಧರಿಸಬೇಕಾಗಿದ್ದ ಬಟ್ಟೆ ಕಳೆದುಹೋಗಲು ಕಾರಣವಾಗಿದ್ದ ಪ್ರತಿಷ್ಠಿತ ಕೊರಿಯರ್ ಕಂಪನಿಗೆ ಗ್ರಾಹಕರ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ. ಅಲ್ಲದೇ, ಬಟ್ಟೆಯ ಮೊತ್ತದೊಂದಿಗೆ ಕೊರಿಯರ್ ಶುಲ್ಕ ಹಿಂದಿರುಗಿಸಲು ಸೂಚನೆ ನೀಡಿದೆ.

ತನ್ನ ಸ್ನೇಹಿತನ ಮದುವೆ ಬಟ್ಟೆ ಕಳೆದೋಗಲು ಕಾರಣವಾಗಿದ್ದ ಕೊರಿಯರ್ ಕಂಪನಿಯ ಕ್ರಮ ಪ್ರಶ್ನಿಸಿ ಬೆಂಗಳೂರಿನ ಮೈಸೂರು ರಸ್ತೆಯ ಪ್ರಮೋದ್ ಬಡಾವಣೆಯ ಎ.ಎಸ್.ಸಿದ್ದೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನಗರದ 2ನೇ ಹೆಚ್ಚುವರಿ ನ್ಯಾಯಾಧೀಶರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಶೋಭಾ ಅವರಿದ್ದ ತ್ರಿಸದಸ್ಯ ಪೀಠ, ಕೊರಿಯರ್ ಕಂಪನಿಯು ತನ್ನ ಸೇವೆ ನಿರ್ವಹಿಸುವಲ್ಲಿ ಸೇವಾ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟು ದೂರುದಾರರಿಗೆ 25 ಸಾವಿರ ರೂಪಾಯಿ ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವಾಗಿ 10 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ. ಅಲ್ಲದೆ, ಬಟ್ಟೆಯ ಮೊತ್ತವಾದ 11,495 ರೂ. ಹಾಗೂ ಕೊರಿಯರ್ ಶುಲ್ಕ 500 ರೂ.ಗಳನ್ನು ಹಿಂದಿರುಗಿಸಲು ನಿರ್ದೇಶಿಸಿದೆ.

ಕೊರಿಯರ್ ಕಂಪನಿ ಪರ ವಕೀಲರು ವಾದ ಮಂಡಿಸಿ, ದೂರುದಾರರು ಕಳುಹಿಸಿದ್ದ ಕೊರಿಯರ್​​ನಲ್ಲಿ 11 ಸಾವಿರ ಮೌಲ್ಯದ ಸೂಟ್ ಇರುವುದು, ಅದರ ಪ್ರಾಮುಖ್ಯತೆ ಬಗ್ಗೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಕೆಲ ಸಂದರ್ಭಗಳಲ್ಲಿ ಇಂತಹ ಘಟನೆಗಳಾಗುತ್ತವೆ. ಕಳೆದು ಹೋದ ವಸ್ತುವನ್ನು ಪತ್ತೆಹಚ್ಚಲು ಎಲ್ಲ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹೆಚ್ಚು ಹಣ ಪಡೆಯುವ ದುರುದ್ದೇಶದಿಂದ ದೂರು ದಾಖಲಿಸಲಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು. ಮನವಿ ತಿರಸ್ಕರಿಸಿದ ಪೀಠ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಸಿದ್ದೇಶ್ ಹಾಗೂ ಮನೀಶ್ ವರ್ಮ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮನೀಶ್​ಗೆ ಮದುವೆ ನಿಶ್ಚಯವಾಗಿ, 2016ರ ಡಿ.1ರಂದು ಹೈದರಾಬಾದ್​​ನಲ್ಲಿ ಮದುವೆ ನಡೆಯಬೇಕಿತ್ತು. ಆತ್ಮೀಯನಾಗಿದ್ದ ಮನೀಶ್​ಗೆ ಸೂಟ್ ಕೊಡಿಸಬೇಕು ಹಾಗೂ ಮದುವೆಯ ದಿನ ಆತ ಅದನ್ನೇ ಧರಿಸಬೇಕು ಎಂಬ ಆಸೆ ಹೊಂದಿದ್ದ. ಇದೇ ಕಾರಣದಿಂದ 11,495 ರೂ. ಬೆಲೆಯ ಸೂಟ್ ಖರೀದಿಸಿದ್ದ.

ಆತ್ಮೀಯ ಸ್ನೇಹಿತನ ಇಚ್ಚೆಗೆ ಒಪ್ಪಿದ್ದ ಮನೀಶ್, ಮದುವೆಗೆ ಪ್ರತ್ಯೇಕ ಸೂಟ್ ಖರೀದಿಸಿರಲಿಲ್ಲ. ಆದರೆ, ಕಾರಣಾಂತರಗಳಿಂದ ಸಿದ್ದೇಶ್​​ ಅವರಿಗೆ ಸ್ನೇಹಿತನ ಮದುವೆಯಲ್ಲಿ ಭಾಗಿಯಾಗಲು ಹೈದರಾಬಾದ್​ಗೆ ತೆರಳಲು ಸಾಧ್ಯವಾಗದ ಕಾರಣ ನ.25ರಂದು ಸೂಟ್​​ಅನ್ನು ಕೊರಿಯರ್ ಮೂಲಕ ರವಾನಿಸಿದ್ದ. ಅದಕ್ಕಾಗಿ 500 ರು.ಗಳ ಶುಲ್ಕ ಪಾವತಿಸಿದ್ದ.

ಆದರೆ, ಮದುವೆ ವೇಳೆ ಸೂಟ್ ಮನೀಶ್​ಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ವಿಚಾರಿಸಿದ ನಂತರ, ಮಾರ್ಗ ಮಧ್ಯೆಯೇ ಸೂಟ್ ಕಳೆದುಹೋಗಿದೆ ಎಂದು ಕೊರಿಯರ್ ಕಂಪನಿ ಹೇಳಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸಿದ್ದೇಶ್ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಮದ್ಯಪಾನ ಮಾಡಿ ವಾಹನ ಚಲಾವಣೆ: ನ್ಯಾಯಾಲಯದಲ್ಲಿ ಮಾತ್ರ ದಂಡ ಪಾವತಿ.. ಹೈಕೋರ್ಟ್​ ಸೂಚನೆ

ABOUT THE AUTHOR

...view details