ಬೆಂಗಳೂರು: ಗ್ರಾಹಕರೊಬ್ಬರಿಂದ ಸುಮಾರು 6 ಲಕ್ಷ ರೂ. ಹಣ ಪಡೆದು ನಿಗದಿತ ಸಮಯಕ್ಕೆ ಸೇವೆ ಒದಗಿಸದ ಸ್ಪೇಸ್ ವುಡ್ ಮಾಡ್ಯುಲರ್ ಕಿಚನ್ ಸಂಸ್ಥೆಯು ಗ್ರಾಹಕರೊಬ್ಬರಿಗೆ 1 ಲಕ್ಷ ರೂ ಗಳ ಪರಿಹಾರ ನೀಡಬೇಕು. ಇದರ ಜತೆಗೆ 30 ದಿನದಲ್ಲಿ ಒಪ್ಪಂದ ಮಾಡಿಕೊಂಡ ಕೆಲಸ ಪೂರ್ಣಗೊಳಿಸಬೇಕು ಎಂದು ನಗರದ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ಸೇವಾ ನ್ಯೂನತೆ ಆರೋಪದಲ್ಲಿ ನಗರದ ಕೋಡಿಗೆಹಳ್ಳಿಯ ಸೀಮಾ ಆಸ್ತಾನ ಎಂಬುವರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಹೆಚ್ ಆರ್ ಶ್ರೀನಿವಾಸ್ ಅವರಿದ್ದ ತ್ರಿಸದಸ್ಯ ಪೀಠ, ಒಪ್ಪಂದ ಮಾಡಿಕೊಂಡಿರುವ ಜವಾಬ್ದಾರಿಯನ್ನು ಆದೇಶವಾದ ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಅಲ್ಲದೆ, ಸೇವಾ ನ್ಯೂನತೆ ಆರೋಪಕ್ಕೆ 50 ಸಾವಿರ ರೂ, ನಿಗದಿತ ಸಮಯಕ್ಕೆ ಸೇವೆ ನೀಡದ ಪರಿಣಾಮದಿಂದ ಮಾನಸಿಕ ಹಿಂಸೆಗೆ ಪರಿಹಾರವಾಗಿ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ದೂರುದಾರರು ತಮ್ಮ ಹೊಸ ಮನೆ ವಿನ್ಯಾಸಗೊಳಿಸಲು ಸ್ಪೇಸ್ ವಿಡ್ ಮಾಡ್ಯುಲರ್ ಕಿಚನ್ ಸಂಸ್ಥೆಯೊಂದಿಗೆ 6.46 ಲಕ್ಷ ರೂಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ 1.8 ಲಕ್ಷ ರೂ ಗಳನ್ನು ಪಾವತಿಸಿದ್ದರು. ಆದರೂ ವಿನ್ಯಾಸ ಯೋಜನೆ ಪ್ರಾರಂಭಿಸಿರಲಿಲ್ಲ.
ಈ ನಡುವೆ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲಾಗಿತ್ತು. ಆದರೆ, ವಿನ್ಯಾಸದ ಸಾಮಗ್ರಿಗಳನ್ನು ಸರಬರಾಜು ಮಾಡಿರಲಿಲ್ಲ. ಈ ನಡುವೆ ಕಾಮಗಾರಿಯನ್ನೂ ಪ್ರಾರಂಭಿಸಿರಲಿಲ್ಲ ಎಂಬುದಾಗಿ ಒತ್ತಾಯಿಸಿದಾಗ ದೋಷಪೂರಿತ ಸಾಮಾಗ್ರಿ ಪೂರೈಸಿರುತ್ತಾರೆ. ಇದರಿಂದ ಬೇಸತ್ತಿದ್ದ ಸೀಮಾ ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸಿ ಸಂಪೂರ್ಣ ಮೊತ್ತ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.