ಬೆಂಗಳೂರು :ಕ್ರೆಡಿಟ್ ಕಾರ್ಡ್ ಸಂಪೂರ್ಣ ಮೊತ್ತವನ್ನು ಪಾವತಿಸಿದ ಬಳಿಕವೂ 6 ಸಾವಿರ ರೂ. ಪಾವತಿ ಮಾಡುವಂತೆ ಗ್ರಾಹಕರೊಬ್ಬರಿಗೆ ಸೂಚನೆ ನೀಡಿದ್ದ ಖಾಸಗಿ ಬ್ಯಾಂಕ್ವೊಂದಕ್ಕೆ ಗ್ರಾಹಕರ ನ್ಯಾಯಾಲಯವು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೇ, ನೋ ಡ್ಯೂ ಸರ್ಟಿಫಿಕೆಟ್ ನೀಡುವಂತೆ ಸೂಚನೆ ನೀಡಿದ್ದಲ್ಲದೇ, ದಂಡದ ಮೊತ್ತವನ್ನು ಆದೇಶ ಪ್ರತಿ ಲಭ್ಯವಾದ 45 ದಿನಗಳಲ್ಲಿ ಪಾವತಿಸಬೇಕು. ಇಲ್ಲವಾದಲ್ಲಿ ಮಾಸಿಕ ಶೇಕಡಾ 9ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಬೆಂಗಳೂರಿನ ಆಶೋಕ ನಗರದ ಹಿರಿಯ ನಾಗರಿಕರಾದ ಪಿ.ವಿ. ರಮೇಶ್ ಕುಮಾರ್ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ನಗರದ 3ನೇ ಹೆಚ್ಚುವರಿ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಕೆ. ಶಿವರಾಮ ಮತ್ತು ಸದಸ್ಯರಾದ ಚಂದ್ರಶೇಖರ್ ಎಸ್. ನೋಲ ಅವರಿದ್ದ ಪೀಠ ಈ ಆದೇಶ ಮಾಡಿದೆ. ದೂರುದಾರರ ಕ್ರೆಡಿಟ್ ಕಾರ್ಡ್ನಲ್ಲಿ 35 ಪೈಸೆ ಬಾಕಿಯಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವಿಚಾರಣೆಯಲ್ಲಿ 595 ರೂ.ಗಳನ್ನು ಪಾವತಿಸಿಕೊಂಡಿದ್ದಾರೆ. ಇದಾದ ಬಳಿಕ ವಿನಾಕಾರಣ 6 ಸಾವಿರ ರೂ. ಬಾಕಿಯಿದೆ ಎಂಬುದಾಗಿ ಬ್ಯಾಂಕ್ ತಿಳಿಸಿದೆ. ಅಲ್ಲದೆ, ದೂರುದಾರರಿಗೆ ಬ್ಯಾಂಕ್ನವರು ಪದೇ ಪದೆ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ದೂರುದಾರರಾದ ರಮೇಶ್ ಕುಮಾರ್ ಅವರು ಖಾಸಗಿ ಬ್ಯಾಂಕ್ನಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದು, ನಾಲ್ಕು ವರ್ಷಗಳ ಕಾಲ ಬಳಕೆ ಮಾಡಿದ ಹಣವನ್ನು ಕಾಲ ಕಾಲಕ್ಕೆ ಪಾವತಿ ಮಾಡುತ್ತಿದ್ದರು. ಈ ನಡುವೆ ಕೊರೊನಾ ಸಾಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿ ಕಾರ್ಡ್ನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬ್ಯಾಂಕ್ ಅಧಿಕಾರಿಗಳು ಕಾರ್ಡ್ನ್ನು ನಾಶ ಮಾಡುವಂತೆ ಸಲಹೆ ನೀಡಿದ್ದರು. ಆದರೆ, ಇದಾದ ಬಳಿಕವೂ ಬ್ಯಾಂಕ್ ಅಧಿಕಾರಿಗಳು ಬಾಕಿ ಹಣ ಪಾವತಿ ಮಾಡುವಂತೆ ಕೋರಿ ಪದೇ ಪದೇ ಕರೆ ಮಾಡುತ್ತಿದ್ದರು.