ಟನಲ್ ರಸ್ತೆಗಾಗಿ ಸಾರ್ವಜನಿಕ ಟೆಂಡರ್ ಕರೆಯಲು ಸಿದ್ಧತೆ: ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ 190 ಕಿ.ಮೀ ನಷ್ಟು ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಿದ್ದು, 8 ಕಂಪನಿಗಳು ಇದರಲ್ಲಿ ಅರ್ಹತೆ ಪಡೆದುಕೊಂಡಿವೆ. ಈ ಕಂಪನಿಗಳು ಕಾರ್ಯ ಸಾಧ್ಯತಾ ವರದಿ ಸಲ್ಲಿಸಲಿದ್ದು, 45 ದಿನಗಳ ಒಳಗಾಗಿ ಸಾರ್ವಜನಿಕ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು, ಕಾರಿಡಾರ್ ಅಭಿವೃದ್ಧಿಪಡಿಸಲು ಟೆಂಡರ್ ಕರೆದಿದ್ದೆವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕರು ತಮ್ಮ ಪ್ರಸ್ತಾವನೆ ಸಲ್ಲಿಸಿದ್ದರು. ರಸ್ತೆ ಮೂಲಸೌಕರ್ಯ, ದಟ್ಟಣೆ ನಿವಾರಣೆ, ಟನಲ್ ರಸ್ತೆ, ರಸ್ತೆ ಅಗಲೀಕರಣ ವಿಚಾರವಾಗಿ ಸಲಹೆ ಪಡೆದಿದ್ದೆವು. ಟನಲ್ ರಸ್ತೆ ವಿಚಾರದಲ್ಲಿ ಬಂಡವಾಳವನ್ನು ತರಬೇಕು ಎಂದು ನಾವು ಸೂಚಿಸಿದ್ದೆವು. ಅಂತಾರಾಷ್ಟ್ರೀಯ ಬಿಡ್ಡಿಂಗ್ ಮಾಡಿದ ಪರಿಣಾಮ 9 ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, ಕೊನೆ ದಿನಾಂಕ ಮುಕ್ತಾಯವಾಗಿದೆ ಎಂದರು.
ಟನಲ್ ರಸ್ತೆ 4 ಪಥದಲ್ಲಿ ಮಾಡಬೇಕೇ, 6 ಪಥದಲ್ಲಿ ಮಾಡಬೇಕೇ? ಎಲ್ಲಿ ಆರಂಭವಾಗಿ ಎಲ್ಲಿ ಅಂತ್ಯವಾಗಬೇಕು. ಎಲ್ಲೆಲ್ಲಿ ತೆರೆದುಕೊಳ್ಳಬೇಕು? ಬೆಂಗಳೂರಿನಾದ್ಯಂತ ವಿಸ್ತರಣೆ ಮಾಡಬೇಕಾ ಎಂಬ ವಿಚಾರವಾಗಿ ನಾವು ತೀರ್ಮಾನ ಮಾಡಬೇಕು. ಇದೆಲ್ಲವೂ ಒಂದೆರಡು ದಿನಗಳಲ್ಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಕಂಪನಿಗಳು ಅಧ್ಯಯನ ಮಾಡಿ ವರದಿ ನೀಡಲಿವೆ ಎಂದು ಹೇಳಿದರು.
ಈ ಯೋಜನೆ ಬಹಳ ದೊಡ್ಡ ಪ್ರಮಾಣದಲ್ಲಿದ್ದು, ಭಾರಿ ಪ್ರಮಾಣದ ಹಣಕಾಸಿನ ಅಗತ್ಯವಿದೆ. ಹೀಗಾಗಿ ಇದನ್ನು ವಿವಿಧ ಹಂತಗಳಲ್ಲಿ ಮಾಡಬೇಕಾಗುತ್ತದೆ. ನಾವು ಸದ್ಯಕ್ಕೆ 190 ಕಿ.ಮೀ ನಷ್ಟು ಪ್ರಸ್ತಾವನೆ ನೀಡಿದ್ದೇವೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ ಟಿ ಮಾಲ್ ಜಕ್ಷನ್ ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ ಶಿರಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆ ಯಶವಂತಪುರ ಜಕ್ಷನ್, ಹೊರ ವರ್ತುಲ ರಸ್ತೆಯಲ್ಲಿ ಗುರಗುಂಟೆ ಪಾಳ್ಯ, ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಗುರುತಿಸಿದ್ದು, ಆದ್ಯತೆ ಮೇರೆಗೆ ಈ ಪ್ರದೇಶಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲಿ ಯಾವ ರೀತಿ ಈ ಟನಲ್ ರಸ್ತೆ ಮಾಡಬಹುದು ಎಂದು ಕಂಪನಿಗಳು ಅಧ್ಯಯನ ನಡೆಸಲಿವೆ ಎಂದು ವಿವರಣೆ ನೀಡಿದರು.
ನಮ್ಮಲ್ಲಿ ಟನಲ್ ಕೊರೆಯುವ ಯಂತ್ರ ಚಿಕ್ಕದಿದೆ. ಮುಂಬೈ ಹಾಗೂ ಉತ್ತರ ಭಾರತದಲ್ಲಿ ಈಗ ಟನಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕನಿಷ್ಠ ನಾಲ್ಕು ಪಥದ ಟನಲ್ ರಸ್ತೆ ಬೇಕು. ಈ ರಸ್ತೆಗಳು ತೆರೆದುಕೊಳ್ಳಲು ಹೆಚ್ಚಿನ ಜಾಗ ಬೇಕು. ಗಾಲ್ಫ್ ಕೋರ್ಸ್, ಟರ್ಫ್ ಕ್ಲಬ್, ಅರಮನೆ ಮೈದಾನ ಜಾಗಗಳನ್ನು ಬೊಮ್ಮಾಯಿ ಅವರ ಕಾಲದಲ್ಲಿ ಗುತ್ತಿಗೆ ವಿಸ್ತರಣೆ ಮಾಡಿದ್ದು, ಅವರ ಜತೆ ನ್ಯಾಯ ಪಂಚಾಯ್ತಿ ಮಾಡಬೇಕಿದೆ ಎಂದು ತಿಳಿಸಿದರು.
ಇನ್ನು ಮುಂಗಾರು ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಎಂಜಿನಿಯರ್ಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಮಳೆ ನೀರು ಹರಿದುಹೋಗಲು ಚರಂಡಿ ಕಾಮಗಾರಿಗಳು ಸೇರಿದಂತೆ ಪ್ರಮುಖ ಆದ್ಯತೆಯ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕೆಂದು ಜವಾಬ್ದಾರಿ ನೀಡಲಾಗಿದೆ. ಕಳೆದ ವಾರದಲ್ಲಿ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರ ಜೊತೆ ಚರ್ಚೆ ಮಾಡಿದ್ದೇನೆ. ನಮ್ಮ ಯೋಜನಾ ಆಯೋಗದ ಮುಖ್ಯಸ್ಥರು ಕೂಡ ಈ ವಿಚಾರವಾಗಿ ಒತ್ತು ನೀಡುತ್ತಿದ್ದಾರೆ. ಇದೇ ತಿಂಗಳು 7ರಂದು ಹೊರವರ್ತುಲ ರಸ್ತೆಗೆ ಭೇಟಿ ನೀಡುವುದಾಗಿ ಹೇಳಿದ್ದೇನೆ ಎಂದು ವಿವರಿಸಿದರು.
ರಸ್ತೆ ಗುಂಡಿ ಮುಚ್ಚಲು ಸೂಚನೆ: ರಸ್ತೆಗುಂಡಿ ವಿಚಾರದಲ್ಲಿ ಪಾಲಿಕೆ ಎಂಜಿನಿಯರ್ ಗಳು ಸಂಚಾರಿ ಪೊಲೀಸರ ಸಹಾಯದಲ್ಲಿ ಕೆಲಸ ಮಾಡಬೇಕು. ಸಂಚಾರಿ ಪೊಲೀಸರು ಸೂಚಿಸುವ ಕಡೆಗಳಲ್ಲಿ ಪಾಲಿಕೆಯಿಂದ ತ್ವರಿತವಾಗಿ ರಸ್ತೆಗುಂಡಿ ಸರಿಪಡಿಸುವ ಕೆಲಸ ನಡೆಯಲಿದೆ. ರಸ್ತೆಗುಂಡಿಗಳಿಂದ ಯಾವುದೇ ಅನಾಹುತ ಆಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಗುಂಡಿಯನ್ನು ಸಾರ್ವಜನಿಕರು ಕೂಡ ರಸ್ತೆ ಗುಂಡಿಗಳ ವಿಚಾರವಾಗಿ ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಬಹುದು. ಮಳೆ ಬಂದಾಗ ರಸ್ತೆಗುಂಡಿ ಬೀಳುವುದು ಸಹಜ. ನಗರದ ಪ್ರಮುಖ ಪ್ರದೇಶಗಳಲ್ಲಿ ಇಂತಹ ರಸ್ತೆಗುಂಡಿಗಳನ್ನು ತಕ್ಷಣವೇ ಸರಿಪಡಿಸಲಾಗುವುದು ಎಂದರು.
ಟೆಂಡರ್ ಶ್ಯೂರ್ ರಸ್ತೆ: ಸರ್ಕಾರ 350 ಕಿ.ಮೀ ಟೆಂಡರ್ ಶ್ಯೂರ್ ರಸ್ತೆ ಮಾಡಿದ್ದು, ಈ ರಸ್ತೆಯಲ್ಲಿ ಅಂಡರ್ ಗ್ರೌಂಡ್ನಲ್ಲಿ ಕೇಬಲ್ ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿದ್ದರೂ ಅವುಗಳನ್ನು ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಎಲ್ಲರೂ ಇದನ್ನು ಉಪಯೋಗಿಸಿಕೊಳ್ಳಬೇಕು. ಪ್ರತಿ ಕಿ.ಮೀ 10 ಕೋಟಿ ರೂ. ಸರಾಸರಿಯಲ್ಲಿ ಖರ್ಚಾಗಿದೆ. ಆದರೂ ಕೇಬಲ್ಗಳು ಮೇಲೆಯೇ ಹಾರಾಡುತ್ತಿವೆ. ಇವುಗಳನ್ನು ಕಾನೂನುಬದ್ಧವಾಗಿ ಬಳಸದಿದ್ದರೆ ನಮ್ಮ ಅಧಿಕಾರಿಗಳು ಆ ಕೇಬಲ್ ಗಳನ್ನು ಕಟ್ ಮಾಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಪತ್ತು ನಿರ್ವಹಣೆಗಾಗಿ ಅರ್ಬನ್ ಫ್ಲಡ್ ಮಿಟಿಗೇಷನ್ ಪ್ರಪೋಸಲ್ಗಾಗಿ ವಿಶ್ವ ಬ್ಯಾಂಕ್ ನಿಂದ 3 ಸಾವಿರ ಕೋಟಿಗೆ ಪ್ರಸ್ತಾವನೆ ನೀಡಲಾಗಿದ್ದು, ಇಂದು ಅದರ ಅನುಮತಿ ಪಡೆಯಲಾಗುವುದು. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಬರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಲು ಮುಂದಾಗಿದ್ದೇವೆ. ರಾಷ್ಟ್ರೀಯ ವಿಪತ್ತು ನಿರ್ವಹಣೆಯಿಂದ 250 ಕೋಟಿಯಷ್ಟು ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜನ ನನಗೆ ಅಧಿಕಾರ, ಜವಾಬ್ದಾರಿ ನೀಡಿದ್ದಾರೆ : ಟನಲ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರು ದುಡ್ಡು ಮಾಡುವ ಯೋಜನೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, ಜನ ನನಗೆ ಅಧಿಕಾರ, ಜವಾಬ್ದಾರಿ ನೀಡಿದ್ದು, ಅದರ ಮೇಲೆ ನಾನು ಕೆಲಸ ಮಾಡುತ್ತೇನೆ. ವಿರೋಧ ಪಕ್ಷದವರನ್ನು ಕೇಳಿ ಯೋಜನೆ ರೂಪಿಸಲು ಸಾಧ್ಯವೇ? ಕೋಳಿ ಕೇಳಿ ಮಸಾಲೆ ರೆಡಿ ಮಾಡುವುದಿಲ್ಲ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಕೇಂದ್ರ ಸರ್ಕಾರದ ನೆರವು ಕೇಳುತ್ತೀರಾ ಎಂದು ಪ್ರಶ್ನಿಸಿದಾಗ, ಖಂಡಿತವಾಗಿ ಕೇಂದ್ರದ ನೆರವು ಕೇಳುತ್ತೇವೆ. ಈ ಪ್ರಸ್ತಾವನೆಗಳು ಸಲ್ಲಿಕೆಯಾದ ನಂತರ ನಾವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈಗಾಗಲೇ ನಾನು ಮುಖ್ಯಮಂತ್ರಿಗಳು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿದೆ. ತುಮಕೂರು ರಪಸ್ತೆ, ಕೆ.ಆರ್ ಪುರಂ ರಸ್ತೆ, ಮೈಸೂರು ರಸ್ತೆ ಮೂಲಕ ಸಂಚಾರ ದಟ್ಟಣೆ ಆಗಮಿಸುತ್ತಿದೆ. ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡಿದ್ದು, ಅವರೂ ಸಲಹೆ ನೀಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ತಿಳಿಸಿದರು.
ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆಗೆ ನಿರ್ಧಾರ: ಉದ್ಯಮಿ ಮೋಹನ್ ದಾಸ್ ಪೈ ಅವರ ಸಮಿತಿ ಕೊಟ್ಟಿರುವ ವರದಿಯಲ್ಲಿ ತೆರಿಗೆ ಶಿಫಾರಸ್ಸಿನ ಬಗ್ಗೆ ಕೇಳಿದಾಗ, ಸದ್ಯ ಇರುವ ತೆರಿಗೆ ಪದ್ಧತಿಯಲ್ಲಿ ನಮಗೆ ತೃಪ್ತಿ ಇಲ್ಲ. ಈಗ ಕೇವಲ 3 ಸಾವಿರ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೀಗಾಗಿ ನಾವು ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆ ಮಾಡುತ್ತಿದ್ದೇವೆ. ಸರ್ಕಾರಿ ಕಚೇರಿ ಸೇರಿ, ಕೇಂದ್ರ ಸರ್ಕಾರದ ಕಚೇರಿಗಳು ತೆರಿಗೆ ಪಾವತಿಸಬೇಕು ಎಂದು ಪತ್ರ ಬರೆದಿದ್ದೇನೆ. ಹೆಚ್ಎಎಲ್ ನವರು 93 ಕೋಟಿ ತೆರಿಗೆ ಪಾವತಿಸಿದ್ದಾರೆ. ಕೆಇಬಿ, ಕೆಪಿಟಿಸಿಎಲ್ ನಂತಹ ರಾಜ್ಯ ಸರ್ಕಾರಿ ಕಚೇರಿಗಳೂ ಆಸ್ತಿ ತೆರಿಗೆ ಪಾವತಿಗೆ ಸೂಚಿಸಿದ್ದೇನೆ. ಮೊದಲು ಸರ್ಕಾರದವರಿಂದ ತೆರಿಗೆ ಸಂಗ್ರಹಿಸೋಣ. ಮೋಹನ್ ದಾಸ್ ಪೈ ಅವರ ಶಿಫಾರಸ್ಸಿನ ಬಗ್ಗೆ ನಾವು ಚರ್ಚೆ ಮಾಡಬೇಕಿದೆ ಎಂದರು.
70 ಸಾವಿರ ಸಲಹೆಗಳು : ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ 70 ಸಾವಿರ ಸಲಹೆಗಳು ಬಂದಿವೆ. ಇದೇ ತಿಂಗಳು 9ರಂದು ದೊಡ್ಡ ವಿಚಾರ ಸಂಕೀರ್ಣ ಹಮ್ಮಿಕೊಂಡಿದ್ದೇವೆ. ನಂತರ ಅದರ ಮೇಲೆ ನಾವು ಕೆಲಸ ಆರಂಭಿಸುತ್ತೇವೆ. ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಸ್ಯಾಟಲೈಟ್ ನಗರ ನಿರ್ಮಾಣದ ಬಗ್ಗೆ ಕೇಳಿದಾಗ, ಈಗ ಸದ್ಯಕ್ಕೆ ಬಿಡದಿಯಲ್ಲಿ ಆದ್ಯತೆ ಮೇರೆಗೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಈ ವಿಚಾರವಾಗಿ ಶಾಸಕರು ಹಾಗೂ ಸಂಸದರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.
ಸ್ವಯಂಘೋಷಿತ ತೆರಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಬೇರೆ ಆಯ್ಕೆ ಏನಿದೆ ಎಂದು ಕೇಳಿದಾಗ, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕಿಂತ ಪರಿಣಾಮಕಾರಿಯಾಗಿಲ್ಲ. ವಿಧಾನಸೌಧದಲ್ಲೇ 3 ಲಕ್ಷ ಇದ್ದರೆ 2 ಲಕ್ಷ ಎಂದು ಹೇಳಿಕೊಳ್ಳುತ್ತಾರೆ. ವಾಣಿಜ್ಯ ಉದ್ದೇಶಕ್ಕೆ ಕಟ್ಟಿರುವ ಕಟ್ಟಡಗಳಲ್ಲಿ ಕೇವಲ ವಾಸಪ್ರದೇಶದ ತೆರಿಗೆ ಪಾವತಿಸುತ್ತಿದ್ದು, ಮಾಣಿಜ್ಯ ಉದ್ದೇಶದ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಪ್ರತಿ ಮನೆಯ ಲೆಕ್ಕ ಹಾಕಬೇಕು ಎಂದು ಭಾವಿಸಿದ್ದೇವೆ. ಈ ವಿಚಾರವಾಗಿ ಅಧಿಕಾರಿಗಳ ಬದಲಾವಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂಓದಿ:ನಿಲ್ಲದ ಕಾವೇರಿ ಕಿಚ್ಚು : ಕೆಆರ್ಎಸ್ ಡ್ಯಾಂ ಮುತ್ತಿಗೆಗೆ ಹೊರಟ ಕನ್ನಡಪರ ಸಂಘಟನೆಗಳು