ಬೆಂಗಳೂರು/ ನವದೆಹಲಿ: ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನವದೆಹಲಿಯಲ್ಲಿ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2023 ನಡೆಯುತ್ತಿದೆ. ಇಲ್ಲಿನ ಪ್ರಗತಿ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಕರ್ನಾಟಕ ಪೆವಿಲಿಯನ್ ಮಾದರಿಯಲ್ಲಿ 50 ಮಳಿಗೆಗಳನ್ನು ಒಳಗೊಂಡ ಒಂದು ಶಾಪಿಂಗ್ ಕಟ್ಟಡ ಸಂಕೀರ್ಣವನ್ನು ಆದಷ್ಟು ಬೇಗ ದೆಹಲಿಯಲ್ಲಿ ನಿರ್ಮಾಣ ಮಾಡುವುದಾಗಿ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅವರು ಪ್ರಕಟಿಸಿದ್ದಾರೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು ಆಯೋಜಿಸಿದ್ದ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2023ರಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ದೆಹಲಿಯಲ್ಲಿ 50 ಮಳಿಗೆಗಳನ್ನು ಶಾಶ್ವತವಾಗಿ ನಿರ್ಮಾಣ ಮಾಡಲಾಗುವುದು. ಇದರಿಂದ ಕರ್ನಾಟಕದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.