ಬೆಂಗಳೂರು:ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದ ಬೆನ್ನಲ್ಲೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಹೊಸ ಕಾಯ್ದೆಯ ಪ್ರಕಾರ, ಕಾರ್ಪೊರೇಟರ್ಗಳ ಸಂಖ್ಯೆ 198 ರಿಂದ 243ಕ್ಕೇರಿಕೆಯಾಗಿದೆ. ಹಾಗಾಗಿ ಹೊಸ ಕೌನ್ಸಿಲ್ ಹೌಸ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಟಚ್ ಕೊಡಲು ಬಿಬಿಎಂಪಿ ತೀರ್ಮಾನಿಸಿದೆ. ಕಳೆದ ಬಾರಿ 198 ವಾರ್ಡ್ಗೆ ಸೀಮಿತವಾಗಿದ್ದ ಬಿಬಿಎಂಪಿ, ಈ ಬಾರಿ 243 ವಾರ್ಡ್ಗೆ ತನ್ನ ಸಂಖ್ಯೆ ಹೆಚ್ಚಿಸಿಕೊಂಡಿದೆ. ಕೌನ್ಸಿಲ್ ಕಟ್ಟಡಕ್ಕೆ ಹೊಸ ಬ್ಲೂಪ್ರಿಂಟ್ ಸಿದ್ದಪಡಿಸಿದ್ದ ಪಾಲಿಕೆಯಿಂದ 10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೂ ಪಾಲಿಕೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು, ಪರಿಷತ್ ಸದಸ್ಯರನ್ನು ಸೇರಿ ಒಟ್ಟು 270 ಮಂದಿ ಕೂರಲು ಕೌನ್ಸಿಲ್ ಸಭಾಂಗಣದಲ್ಲಿ ಅವಕಾಶವಿತ್ತು. ಈಗ 364 ಕುರ್ಚಿಗಳಿಗೆ ಪಾಲಿಕೆ ನೂತನ ಕೌನ್ಸಿಲ್ ಕಟ್ಟಡ ವಿಸ್ತರಣೆಗೊಳ್ಳಲಿದೆ.
ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆದ ಸಿಎಂ
ಸೌಂಡ್ ಪ್ರೂಫ್ ಅಕೌಸ್ಟಿಕ್ಸ್ ವ್ಯವಸ್ಥೆ:ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಜೊತೆಗೆ ಇಡೀ ಸಭಾಂಗಣಕ್ಕೆ ಸೌಂಡ್ ಪ್ರೂಫ್ ಅಕೌಸ್ಟಿಕ್ಸ್ ಅಳವಡಿಸಲಾಗುತ್ತಿದೆ. ಕೌನ್ಸಿಲ್ ಹೌಸ್ನಲ್ಲಿ ಸಿಸಿ ಕ್ಯಾಮರಾ ಕೂಡ ಅಳವಡಿಕೆಯಾಗಲಿದೆ. ಕೌನ್ಸಿಲ್ ಸಭೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರತ್ಯೇಕ ಅಸನದ ವ್ಯವಸ್ಥೆ ಮಾಡಲಾಗುತ್ತಿದೆ.