ಬೆಂಗಳೂರು: "ನಗರದ ಸಮೀಪ 2 ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನ ನಗರ ಮಾಡಬೇಕು ಎಂಬುದು ನನ್ನ ಕನಸು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗುರುವಾರ ಸೆಂಟ್ರಲ್ ಕಾಲೇಜಿನ ಜ್ಞಾನ ಭಾರತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ನವೀಕೃತ ಆವರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಜ್ಞಾನ ನಗರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಉತ್ತಮ ವಿವಿಗಳು ಬಂದು ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ದೊರೆಯಬೇಕು. ಐಐಟಿ, ಹಾರ್ವರ್ಡ್ ವಿಶ್ವವಿದ್ಯಾಲಯಗಳಿಗೆ ಜ್ಞಾನ ನಗರದಲ್ಲಿ ಆಶ್ರಯ ನೀಡಲಾಗುವುದು. ಕರ್ನಾಟಕದ ಭವಿಷ್ಯದ ಒಕ್ಕಣೆಯನ್ನು ಇಲ್ಲಿನ ವಿದ್ಯಾರ್ಥಿಗಳೇ ಬರೆಯುವಂತೆ ತಯಾರು ಮಾಡುವುದು ಇದರ ಉದ್ದೇಶವಾಗಿದೆ" ಎಂದು ಹೇಳಿದರು.
ಬೆಂಗಳೂರು ಶೈಕ್ಷಣಿಕ ಜಿಲ್ಲೆ: "ಬೆಂಗಳೂರು ವಿಶ್ವವಿದ್ಯಾಲಯದ ಭಾಗದಲ್ಲಿ ಆರು ಶೈಕ್ಷಣಿಕ ಸಂಸ್ಥೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಅದರ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ. ಈ ಎಲ್ಲಾ ಸಂಸ್ಥೆಗಳೂ ಇದಕ್ಕೆ ಕೊಡುಗೆ ನೀಡಲಿವೆ. ಇಡೀ ವಿಶ್ವದಲ್ಲಿಯೇ ಒಂದೆಡೆ ಇಷ್ಟು ಶೈಕ್ಷಣಿಕ ಸಂಸ್ಥೆಗಳಿವೆ. ಅವೆಲ್ಲವುಗಳಿಗೂ ಸಾಮಾನ್ಯ ಸೌಲಭ್ಯಗಳನ್ನು ಸೃಷ್ಟಿಸಬೇಕು. ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲು ತೀರ್ಮಾನ ಮಾಡಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಇದು ಯಶಸ್ವಿಯಾದರೆ, ಶೈಕ್ಷಣಿಕ ಜಿಲ್ಲೆಗಳನ್ನು ಸೃಜಿಸಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ" ಎಂದರು.
ಎನ್ಇಪಿ ಅನುಷ್ಠಾನ: "ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿದ್ದು, ಇದಕ್ಕೆ ಅವಕಾಶವಿದೆ. ಮೂರು ವರ್ಷದಲ್ಲಿ 2 ಪದವಿ ಪಡೆಯಬಹುದು. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಅವಕಾಶ ಹಾಗೂ ನೆರವು ನೀಡಲಾಗುತ್ತದೆ. ಮೂರು ವರ್ಷ ಸಂಶೋಧನೆ ಮಾಡಿ ಎನ್ಇಪಿ ಅನುಷ್ಠಾನ ಮಾಡಲಾಗಿದೆ. ಕರ್ನಾಟಕ ಇದನ್ನು ಅನುಷ್ಠಾನ ಮಾಡಿದ ಮೊದಲ ರಾಜ್ಯ. ಹತ್ತಿರದ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿಯಾಗಬಹುದು" ಎಂದು ಸಿಎಂ ತಿಳಿಸಿದರು.