ಕರ್ನಾಟಕ

karnataka

ETV Bharat / state

ಮೂಡುಬಿದಿರೆ ಪ್ರಾಚೀನ ಸ್ಮಾರಕ ಬಳಿ ಮಾರುಕಟ್ಟೆ ನಿರ್ಮಾಣ: ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ - ಮೂಡುಬಿದಿರೆಚೌಟರ ಅರಮನೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿರುವ ಪುರಾತನ ಚೌಟರ ಅರಮನೆಯನ್ನು ಸಂರಕ್ಷಿತ ಸ್ಮಾರಕ ಎಂದು ಪುರಾತತ್ವ ಇಲಾಖೆ ಘೋಷಿಸಿದೆ. ಅಲ್ಲದೆ, ಐತಿಹಾಸಿಕ ಸ್ಮಾರಕದ ಸುತ್ತಲಿನ 200 ಮೀಟರ್ ಪ್ರದೇಶವು ನಿಯಂತ್ರಿತ ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಬೇಕಾದರೆ, ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೀಗಿದ್ದೂ ನಿಷೇಧಿತ ವಲಯದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಖಾಸಗಿಯವರಿಗೆ ಗುತ್ತಿಗೆ ನೀಡಿರುವುದನ್ನ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

high court
ಹೈಕೋರ್ಟ್

By

Published : Aug 2, 2021, 9:04 PM IST

ಬೆಂಗಳೂರು: ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದಿಂದ ನಿಯಂತ್ರಿಸಲ್ಪಡುವ ಮೂಡುಬಿದಿರೆಯ ಪ್ರಾಚೀನ ಚೌಟರ ಅರಮನೆ ಸಮೀಪದಲ್ಲಿ ನಿರ್ಮಿಸಿರುವ ಮಾರುಕಟ್ಟೆ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣದ ಸಂಪೂರ್ಣ ಸಮೀಕ್ಷೆಗೆ ಸಂಬಂಧಿಸಿದಂತೆ 30 ದಿನಗಳಲ್ಲಿ ಮಾಹಿತಿ ನೀಡುವಂತೆ ಹೈಕೋರ್ಟ್ ಮೂಡಬಿದಿರೆ ಪುರಸಭೆಗೆ ಸೂಚಿಸಿದೆ.

ಪ್ರಾಚೀನ ಸ್ಮಾರಕದ ಬಳಿ ಹಳೆಯ ಮಾರುಕಟ್ಟೆ ಕಟ್ಟಡವನ್ನು ತೆರವು ಮಾಡಿ ಹೊಸದಾಗಿ ನಿರ್ಮಿಸುವುದನ್ನು ಪ್ರಶ್ನಿಸಿ ಜೇಸನ್ ಮಾರ್ಷಲ್ ನವಾರೇಸ್ ಹಾಗೂ ಸೋಮನಾಥ್ ಕೋಟ್ಯಾನ್ ಎಂಬುವರು ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ನ್ಯಾ. ಎನ್.ಎಸ್ ಸಂಜಯಗೌಡ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಸ್ಮಾರಕದ ನಿಯಂತ್ರಿತ ಪ್ರದೇಶದಲ್ಲಿ 20 ಕಟ್ಟಡಗಳನ್ನು ಗುರುತಿಸಲಾಗಿದ್ದು, ಮೂರು ಕಟ್ಟಡಗಳು ನಿರ್ಬಂಧಿತ ಪ್ರದೇಶದಲ್ಲಿವೆ. ಸಂಪೂರ್ಣ ಸಮೀಕ್ಷೆ ನಡೆಸಲು ಇನ್ನಷ್ಟು ಮಾಹಿತಿ ಬೇಕಾಗಿದೆ. ಅಗತ್ಯವಿರುವ ಹೆಚ್ಚಿನ ಮಾಹಿತಿ ನೀಡಲು ಮೂಡಬಿದಿರೆ ಪುರಸಭೆ 30 ದಿನಗಳ ಕಾಲಾವಕಾಶ ಕೇಳಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ 30 ದಿನಗಳಲ್ಲಿ ಮಾಹಿತಿ ನೀಡುವಂತೆ ಮೂಡುಬಿದಿರೆ ಪುರಸಭೆಗೆ ಸೂಚಿಸಿತು. ಅಲ್ಲದೇ, ಸೆಪ್ಟೆಂಬರ್ 16ರೊಳಗೆ ಸಮೀಕ್ಷಾ ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆಗೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ :

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿರುವ ಪುರಾತನ ಚೌಟರ ಅರಮನೆಯನ್ನು ಸಂರಕ್ಷಿತ ಸ್ಮಾರಕ ಎಂದು ಪುರಾತತ್ವ ಇಲಾಖೆ ಘೋಷಿಸಿದೆ. ಚೌಟರ ಅರಮನೆಯ 200 ಮೀಟರ್ ಅಂತರದಲ್ಲಿ ಮೂಡುಬಿದಿರೆ ಪುರಸಭೆಗೆ ಸೇರಿದ 100 ವರ್ಷಕ್ಕೂ ಹಳೆಯ ಮಾರುಕಟ್ಟೆ ಕಟ್ಟಡ ಇದೆ. ಪುರಾತತ್ವ ಸ್ಮಾರಕ ಸಂರಕ್ಷಣಾ ನಿಯಮಗಳ ಪ್ರಕಾರ ಪ್ರಾಚೀನ ಸ್ಮಾರಕಗಳ ಸುತ್ತಲಿನ 100 ಮೀಟರ ಜಾಗ ನಿಷೇಧಿತ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಕಟ್ಟಡ ನಿರ್ಮಿುಸುವಂತಿಲ್ಲ.

ಇನ್ನು ಸ್ಮಾರಕದ ಸುತ್ತಲಿನ 200 ಮೀಟರ್ ಪ್ರದೇಶವು ನಿಯಂತ್ರಿತ ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಬೇಕಾದರೆ, ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೀಗಿದ್ದೂ ನಿಷೇಧಿತ ವಲಯದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಖಾಸಗಿಯವರಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲ. ಹೀಗೆ ಕಟ್ಟಡ ನಿರ್ಮಿಸಲು ಪುರಸಭೆಗೆ ಅಧಿಕಾರವಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದು, ಪ್ರಾಚೀನ ಸ್ಮಾರಕಕ್ಕೆ ಧಕ್ಕೆಯಾಗದಂತೆ ಸೂಕ್ತ ಆದೇಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details