ಬೆಂಗಳೂರು: ನಗರದ ಆರ್.ಎಂ.ಸಿ ಯಾಡ್೯ನಲ್ಲಿನ ಕಾಮಗಾರಿ ಹಂತದ ಮಲ್ಟಿ ಪಾರ್ಕಿಂಗ್ ಕಟ್ಟಡ ಕುಸಿದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಮಂದಿಗೆ ಗಂಭೀರ ಗಾಯಗಳಾಗಿವೆ.
ಎಪಿಎಂಸಿಯು ಮಲ್ಟಿ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ ಖಾಸಗಿ ಕಂಪನಿಗೆ 77 ಕೋಟಿ ವೆಚ್ಚದಲ್ಲಿ ಗುತ್ತಿಗೆ ನೀಡಿತ್ತು, ಎರಡು ವರ್ಷ ಅವಧಿಯಲ್ಲಿ ಮುಗಿಯಬೇಕಾಗಿದ್ದ ಕೆಲಸ ಇನ್ನೂ ಮುಗಿದಿರಲಿಲ್ಲ. ಇಂದು ಮುಂಜಾನೆ ಕಟ್ಟಡ ಕುಸಿದಿದ್ದು 15 ಜನ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು, ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಘಟನೆಯಲ್ಲಿ ಹೊರ ರಾಜ್ಯದ ರಾಹುಲ್ ಗೋಸ್ವಾಮಿ ಮತ್ತು ರಾಕೇಶ್ ಮೃತ ಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ 12 ಜನರಿಗೆ ಗಂಭೀರ ಗಾಯಗಳಾಗಿದ್ದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಗೋಪಾಲಯ್ಯ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಜೊತೆಗೆ ಈ ಬಗ್ಗೆ ದೂರ ಸಹ ದಾಖಲಾಗಿದೆ. ಆರ್.ಎಂ.ಸಿ ಯಾಡ್೯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಇಂಜಿನಿಯರ್ ಉಮಾಶಂಕರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದಾರೆ.