ಬೆಂಗಳೂರು: ಭಾರತ ದೇಶ ಜಗತ್ತಿನ ಸೂಪರ್ ಪವರ್ ರಾಷ್ಟ್ರ ಆಗಲು ಸಂವಿಧಾನ ಹಾಗೂ ಸಂವಿಧಾನದ ಆಶಯಗಳನ್ನು ಉಳಿಸಬೇಕು. ಸಂವಿಧಾನ ನಾಶವಾದರೆ ದೇಶ ಛಿದ್ರವಾಗಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.
ವಿಧಾನ ಪರಿಷತ್ನ ಬೆಳಗಿನ ಕಲಾಪದಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಎಸ್.ಆರ್.ಪಾಟೀಲ್, ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕು. ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಹೆಣ್ಣು ಮಕ್ಕಳು ಮತ್ತು ಮಕ್ಕಳು ಮಾರಾಟದ ಸರಕಾಗಿದ್ದಾರೆ, ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿ ಚಾರ್ಜ್ ಶೀಟ್ ಹಾಕಬೇಕು. ದೇಶದಲ್ಲಿ ದಲಿತರ ಮೇಲೆ ಹಲ್ಲೆಯಾಗುತ್ತಿರುವ ಬಗ್ಗೆ ವರದಿ ಇದೆ. 77 ನಿಮಿಷಕ್ಕೆ ಒಬ್ಬ ಮಹಿಳೆ ಸಾಯುತ್ತಿದ್ದಾಳೆ, ಪ್ರತಿ 6 ಗಂಟೆಗೆ ಓರ್ವ ವಿವಾಹಿತೆ ಸಾಯುತ್ತಿದ್ದಾಳೆ, ಈ ಬಗ್ಗೆ ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇನೆ ಎಂದರು.
ಪ್ರಜಾತಂತ್ರ ವ್ಯವಸ್ಥೆಗೂ ದಕ್ಕೆ ಬರುತ್ತಿದೆ. ಕಾರ್ಯಾಂಗ, ಶಾಸಕಾಂಗದಿಂದ ನ್ಯಾಯಾಂಗವನ್ನು ಬೇರ್ಪಡಿಸಿದೆ. ಅದಕ್ಕೆ ಸ್ವಾಯತ್ತತೆ ಇದೆ, ಇದಕ್ಕೆ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ಹುದ್ದೆಗಳು ಖಾಲಿ ಇವೆ, ಅದರ ಬಗ್ಗೆ ಗಮನ ಹರಿಸಬೇಕು. ದೆಹಲಿಯಲ್ಲಿ ಗೋಲಿ ಮಾರೋ ಅನ್ನೊ ಪ್ರಕರಣ ಏನಾಯ್ತು? ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಮಾಡಿದ್ರು. ಇದು ಏನನ್ನು ತೋರಿಸಲಿದೆ ಎಂದು ಕೇಂದ್ರದ ವಿರುದ್ಧ ಬೆರಳು ಮಾಡಿ ತೋರಿಸಿದರು.
ಇಡಿ, ಐಟಿ, ಸಿಬಿಐ ಈ ಎಲ್ಲಾ ಸಂಸ್ಥೆಗಳು ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಬಿಡಬೇಕು. ಆರ್ಬಿಐ ಗೌವರ್ನರ್ಗೆ ಏನ್ ಆಗಿದೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನಿವೃತ್ತಿ ಆದ ತಕ್ಷಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುತ್ತಾರೆ. ಇದನ್ನು ಗಮನಿಸಿದರೆ ಜನಸಾಮಾನ್ಯರಿಗೆ ಅನುಮಾನ ಬರುತ್ತದೆ. ಇದೇನಪ್ಪ ಒಳ ಒಪ್ಪಂದ ಏನಾದ್ರು ಇತ್ತಾ ಎಂದರು.
ಇದಕ್ಕೆ ಬಿಜೆಪಿ ಸದಸ್ಯ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ತಿಳಿದುಕೊಂಡವರು, ಓದಿಕೊಂಡವರು, ರಾಜ್ಯಸಭೆಗೆ ಬರುವುದು ತಪ್ಪಾ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರೂ ಕೂಡ ದನಿಗೂಡಿಸಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು ಕೂಡ ಬಿಜೆಪಿ ಸದಸ್ಯರ ವಿರುದ್ಧ ತಿರುಗಿಬಿದ್ದರು. ಹೀಗಾಗಿ ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ನಂತರ ಮಾತು ಮುಂದುವರೆಸಿದ ಎಸ್.ಆರ್.ಪಾಟೀಲ್, ಕೋಮುವಾದಿಗಳು, ಮಾಪಿಯಾದಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಕೇವಲ ಅಭಿವೃದ್ಧಿ ಆದರೆ ಸಲ್ಲದು, ಮಾನವೀಯತೆ ಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸಲಿದೆ. ಸಂವಿಧಾನದ ಆಶಯಗಳನ್ನು ಉಳಿಸಿಕೊಂಡು ಹೋದರೆ ಅದರ ಉಪಯೋಗ ಮುಂದಿನ ಪೀಳಿಗೆಗೆ ಸಿಗಲಿದೆ ಎಂದು ಹೇಳಿದರು.
ವಿವಿಧ ಧರ್ಮ, ಭಾಷೆ, ನಂಬಿಕೆ, ಆಚಾರ-ವಿಚಾರ, ಪದ್ಧತಿ, ಆಹಾರ ಪದ್ಧತಿ ಜನರನ್ನು ಒಟ್ಟಿಗೆ ಮುನ್ನಡೆಸುವುದು ಸಂವಿಧಾನ. ಸಾಮಾಜಿಕ ನ್ಯಾಯ ಬಿತ್ತಿ ಬೆಳೆ ಮಾಡುತ್ತಿರುವುದು ಸಂವಿಧಾನದಿಂದ, ಸಂವಿಧಾನ ಕಳೆದುಕೊಂಡರೆ ಅಂತರ್ ಯುದ್ಧ ಶುರುವಾಗಲಿದೆ, ದೇಶ ಛಿದ್ರವಾಗಲಿದೆ, ಅರಾಜಕತೆ, ಕೋಮುವಾದ ಸಿದ್ದಾಂತ ಆರಂಭಗೊಳ್ಳಲಿದೆ. ಜನಸಾಮಾನ್ಯರು ಹಕ್ಕು ಕಳೆದುಕೊಂಡು ಬದುಕಬೇಕಾಗಲಿದೆ. ಮಹಿಳೆ, ಅಲ್ಪಸಂಖ್ಯಾತ, ಬಡವರು, ದಲಿತರು ದಬ್ಬಾಳಿಕೆಯಲ್ಲಿ ಬದುಕಬೇಕಾಗಲಿದೆ. ಸಂವಿಧಾನದ ರಕ್ಷಣೆ ಜೊತೆಗೆ ಸಂವಿಧಾನದ ಆಶಯಗಳನ್ನೂ ರಕ್ಷಿಸಬೇಕು, ದೇಶ ಸೂಪರ್ ಪವರ್ ಆಗಲು ಸಂವಿಧಾನದ ರಕ್ಷಣೆ ಮಾಡಬೇಕು ಎಂದರು.