ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ: ಬಿ ವೈ ವಿಜಯೇಂದ್ರ - ಸಂವಿಧಾನ ದಿನ

ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಎಸ್ಸಿ ಮೋರ್ಚಾದಿಂದ ಸಂವಿಧಾನ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.

Constitution dedication day program
ಬಿಜೆಪಿ ಎಸ್ಸಿ ಮೋರ್ಚಾದಿಂದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮ ನಡೆಯಿತು.

By ETV Bharat Karnataka Team

Published : Nov 26, 2023, 3:31 PM IST

ಬೆಂಗಳೂರು: ನೆಹರು ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ರಾಜ್ಯ ಎಸ್ಸಿ ಮೋರ್ಚಾ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಶವ ಸಂಸ್ಕಾರ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಸಂವಿಧಾನ ಸಮರ್ಪಣಾ ದಿನ: 26 ನವೆಂಬರ್ ಅನ್ನು ಸಂವಿಧಾನ ಸಮರ್ಪಣಾ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದೇ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು. ಬಿಜೆಪಿ ಉದ್ದೇಶ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವುದು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದು ಮಹತ್ವದ ದಿನ. 1949 ನವೆಂಬರ್ 26 ರಂದು ಭಾರತೀಯರಿಗೆ ಪವಿತ್ರವಾದ ಸಂವಿಧಾನವನ್ನು ಅಂಗೀಕರಿಸಿದ ದಿನ. ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಶ್ರಮ ಮತ್ತು ದೂರದೃಷ್ಟಿಯು ಈ ನಮ್ಮ ಸಂವಿಧಾನವನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಬಾಸಾಹೇಬರ ಆಶಯವನ್ನು ಮೋದೀಜಿ ಅವರು ಅನುಷ್ಠಾನ ಮಾಡುತ್ತಿದ್ದಾರೆ. ಸಂವಿಧಾನವನ್ನು ಉಳಿಸುವ ಮಹತ್ವದ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ಇದೆ ಎಂದು ತಿಳಿಸಿದರು.

ಕೋಳಿ, ಕುರಿ, ಅಕ್ಕಿ ಬೇಡ ಶಿಕ್ಷಣ ಕೊಡಿ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಪಕ್ಷದವರು ದೀನದಲಿತರನ್ನು ಮತಬ್ಯಾಂಕಾಗಿ ಬಳಸಿಕೊಂಡರೇ ಹೊರತು ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಬಯಸಿದಂತೆ ಅಸ್ಪೃಶ್ಯರು ಮತ್ತು ದಲಿತರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ಕೊಡಲು ಹೇಳಿದ್ದರು. ಬಡತನ, ಮೂಢನಂಬಿಕೆ, ಶಿಕ್ಷಣದಿಂದ ವಂಚಿತರಾಗಿರುವ ದಲಿತರನ್ನು ಮೇಲೆತ್ತುವ ಕೆಲಸವನ್ನು ಯಾವತ್ತೂ ಕಾಂಗ್ರೆಸ್ ಪಕ್ಷ ಮಾಡಲಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರು ಅಕ್ಕಿ ಕೊಡ್ತೀನಿ, ಬ್ಯಾಳಿ ಕೊಡ್ತೀನಿ, ಕೋಳಿ, ಕುರಿ ಕೊಡ್ತೀನಿ ಎನ್ನುತ್ತಾರೆ. ದೇಶದ 140 ಕೋಟಿ ಜನತೆಯಲ್ಲಿ ಶೇ 25 ದಲಿತರಿರುವ ನಮಗೆ ಕೋಳಿ, ಕುರಿ, ಅಕ್ಕಿ ಬೇಡ. ಶಿಕ್ಷಣ ಕೊಡಿ ಎಂದು ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

ಭ್ರಷ್ಟಾಚಾರದಿಂದ ಡಿಕೆಶಿ ರಕ್ಷಿಸಲು ಕ್ಯಾಬಿನೆಟ್ ಬಳಕೆ: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆ ವಾಪಸ್​ ಕುರಿತು ಕ್ಯಾಬಿನೆಟ್ ನಿರ್ಣಯಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿಕಾರಕ್ಕಾಗಿ ಯಾವ ಯಾವ ಮುಖವಾಡ ಧರಿಸಿ, ನಮಗೆಲ್ಲ ದ್ರೋಹ ಎಸಗಿ ಸ್ವಾರ್ಥ ರಾಜಕಾರಣ ಮಾಡ್ತಿದೆ ಎಂಬುದು ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಡಿಸಿಎಂ ಶಿವಕುಮಾರ್ ಅವರನ್ನು ಭ್ರಷ್ಟಾಚಾರದಿಂದ ರಕ್ಷಿಸಲು ಕ್ಯಾಬಿನೆಟ್ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಇದು ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವಂತದ್ದು. ಈ ವಿಷಯ ಸ್ಪೀಕರ್ ವ್ಯಾಪ್ತಿಗೆ ಬಾರದೇ ಇರುವ ವಿಷಯ. ಆದರೆ ಈ ವಿಷಯವನ್ನು ಈ ವ್ಯಾಪ್ತಿಗೆ ತಂದು ಪೀಠಕ್ಕೂ ಅಪಮಾನ ಮಾಡಿದ್ದಾರೆ. ರಾಜ್ಯ ಸರ್ಕಾರದ ಅತ್ಯುನ್ನತ ಪೀಠ ಕ್ಯಾಬಿನೆಟ್. ಈ ರಾಜ್ಯದ ಕೋಟಿ ಜನರ ಆಶೋತ್ತರಗಳ ಈಡೇರಿಸುವ ವೇದಿಕೆ. ಆದರೆ ಒಂದು ಪಕ್ಷದ ಅಧ್ಯಕ್ಷರನ್ನು ರಕ್ಷಣೆ ಮಾಡಲು ಈ ರೀತಿಯ ನಿರ್ಣಯ ಮಾಡಿರೋದು ನಿಜಕ್ಕೂ ದುರದೃಷ್ಟಕರ. ಕಾಂಗ್ರೆಸ್​ನ​ ಇಂಥ ಮುಖವಾಡವನ್ನು ಜನರಿಗೆ ನಾವೆಲ್ಲರೂ ತಿಳಿಸಬೇಕು ಎಂದು ಕರೆ ನೀಡಿದರು.

ಇದನ್ನೂಓದಿ:ಸಂವಿಧಾನ ದಿನ: ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಿದ್ದರಾಮಯ್ಯ ಮಾಲಾರ್ಪಣೆ

ABOUT THE AUTHOR

...view details