ಬೆಂಗಳೂರು: ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಒಮ್ಮೆ ತೆರವುಗೊಳಿಸಿ ಸುಮ್ಮನಾಗುವುದಲ್ಲ. ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಾಕೀತು ಮಾಡಿದರು. 'ಆಯುಕ್ತರ ನಡೆ, ವಲಯ ಕಚೇರಿ ಕಡೆ' ಕಾರ್ಯಕ್ರಮದಡಿ ರಾಜರಾಜೇಶ್ವರಿನಗರ ವಲಯ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಉಲ್ಲಾಳ ರಸ್ತೆಯನ್ನು ಅಗಲೀಕರಣ ಮಾಡಲಾಗಿದ್ದು, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳುತ್ತಿದೆ. ಒತ್ತುವರಿ ಆಗದಂತೆ ಕ್ರಮ ವಹಿಸುವಂತೆ ಸ್ಥಳೀಯರು ಮನವಿ ಮಾಡಿದರು. ಆಗ ಪಾದಚಾರಿ ಮಾರ್ಗ ಒತ್ತುವರಿ ಆಗದಂತೆ ಕ್ರಮ ವಹಿಸಿ, ತೆರವುಗೊಳಿಸಿದ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಉಲ್ಲಾಳ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಸದಿಂದ ಬ್ಲಾಕ್ ಸ್ಪಾಟ್ ಸೃಷ್ಟಿಯಾಗುತ್ತಿವೆ. ಕಟ್ಟಡ ತ್ಯಾಜ್ಯವನ್ನು ರಾತ್ರಿ ವೇಳೆ ಸುರಿಯಲಾಗುತ್ತದೆ. ಅದನ್ನು ತಪ್ಪಿಸುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್, ಮಾರ್ಷಲ್‌ಗಳು ರಾತ್ರಿ ವೇಳೆ ಗಸ್ತು ಸುತ್ತಬೇಕು. ಕಸ ಹಾಕುವವರು ಸಿಕ್ಕರೆ ಅವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.