ಬೆಂಗಳೂರು:ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ, ಬೆಲೆ ಏರಿಕೆ ಕಾರಣದಿಂದ ಬಡವರು - ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿಯ ದ್ವೇಷ ರಾಜಕಾರಣ ಇಡೀ ದೇಶವನ್ನು ಆವರಿಸುತ್ತಿದೆ. ನಾವು ದ್ವೇಷ ಅಳಿಸಿ ಪ್ರೀತಿಯ ಭಾರತ ಪುನರ್ ನಿರ್ಮಿಸಲು 'ಉತ್ತಮ ಭಾರತಕ್ಕೆ ಅಡಿಪಾಯ' ಸಮಾವೇಶ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಿರುದ್ಯೋಗ ಬಡತನ ಹೆಚ್ಚಳ: ಅರಮನೆ ಮೈದಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಆಯೋಜಿಸಿದ್ದ "ಉತ್ತಮ ಭಾರತದ ಅಡಿಪಾಯ" ರಾಷ್ಟ್ರೀಯ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿರುದ್ಯೋಗ ಬಡತನ ಹೆಚ್ಚುತ್ತಿರುವಾಗ ದೇಶದಲ್ಲಿ ದ್ವೇಷ ಹರಡುವ ಪಿತೂರಿ ರಾಜಕಾರಣ ನಡೆಯುತ್ತಿದೆ. ನೆಹರೂ ಅವರ ಕಾಲದಿಂದ ಭಾರತಕ್ಕೆ ಹಾಕಲಾಗಿರುವ ಮಾನವೀಯತೆ, ಜಾತ್ಯತೀತತೆ ಮತ್ತು ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಯ ಅಡಿಪಾಯವನ್ನು ಮೋದಿ ಅವರು ಪ್ರಧಾನಿ ಆದ ನಂತರ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಆದರೆ, ಈ ಸಮಾವೇಶ ಮತ್ತೆ ನಮ್ಮ ಭಾರತವನ್ನು ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ಮತ್ತೆ ಎತ್ತಿ ನಿಲ್ಲಿಸಲು ನೆರವಾಗುತ್ತದೆ. ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಇದ್ದ ಭಾರತವನ್ನು ಮೋದಿ ಅವರು ಪ್ರಧಾನಿ ಆದ ಬಳಿಕ ಬಿಜೆಪಿ ಆರ್ಎಸ್ಎಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ ಎಂದು ಆರೋಪಿಸಿದರು.
ಈ ದೇಶದ ಆಧಾರಸ್ಥಂಭ ರೈತರು, ಕಾರ್ಮಿಕರು, ಶ್ರಮಿಕರ ಸಮಸ್ಯೆ ಬಗ್ಗೆ ಯಾವತ್ತೂ ಮಾತನಾಡದ ಬಿಜೆಪಿ ಪರಿವಾರ ಈ ರೈತ - ಕಾರ್ಮಿಕ - ಶ್ರಮಿಕರ ಮಕ್ಕಳು, ವಿದ್ಯಾರ್ಥಿಗಳನ್ನು ದ್ವೇಷದ ಕುಲುಮೆಗೆ ತಳ್ಳಿ ದೇಶವನ್ನು ಮತ್ತೆ ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಈ ದೇಶದ ಯುವಕರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದರು.
ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಬದ್ದವಾಗಿದೆ. ಕಾರ್ಮಿಕರು, ಮಹಿಳೆಯರು, ದಲಿತ, ಶೂದ್ರರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರ ಬದುಕನ್ನು ಉನ್ನತೀಕರಿಸುವ ಮತ್ತು ಈ ಎಲ್ಲ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಅಭಿಯಾನವನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ, ಹೋರಾಟ ನಡೆಸುತ್ತಿದೆ. ಸಾಮಾಜಿಕ ನ್ಯಾಯದ ಪರಂಪರೆಯನ್ನು ಮುನ್ನಡೆಸುವ ರಥ ಕಾಂಗ್ರೆಸ್ ಪಕ್ಷ. ಬಿಜೆಪಿ ಪರಿವಾರ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿ ಆದ ಬಳಿಕ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ ಎಂದು ಆಪಾದಿಸಿದರು.