ಬೆಂಗಳೂರು:ರಾಜ್ಯದ ಎಲ್ಲಾ ಹಳೆ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಿದ ನಂತರ ಆಯಾ ಕೈಗಾರಿಕಾ ಸಂಘಗಳ ಸುಪರ್ದಿಗೆ ಅವುಗಳ ನಿರ್ವಹಣೆಯನ್ನು ಒಪ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ನಗರದ ಉದ್ಯೋಗ ಮಿತ್ರ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಕೈಗಾರಿಕೆ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೈಗಾರಿಕೆ ಪ್ರದೇಶದ ಸಮಸ್ಯೆಗಳನ್ನು ಒಂದು ಬಾರಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಸಮಸ್ಯೆಗಳ ನಿವಾರಣೆ ನಂತರ ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ಸಂಘಗಳಿಗೆ ವಹಿಸಿಕೊಡಲಾಗುವುದು. ಕೈಗಾರಿಕೆ ಪ್ರದೇಶದಿಂದ ಸಂಗ್ರಹವಾಗುವ ಕರದಲ್ಲಿ ಶೇಕಡಾ 70 ರಷ್ಟು ಕೈಗಾರಿಕಾ ಸಂಘಕ್ಕೆ ಮತ್ತು ಶೇಕಡಾ 30 ರಷ್ಟು ಆಯಾ ನಗರಸಭೆಗಳಿಗೆ ನೀಡಲಾಗುವುದು. ಇದರಿಂದ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಹೇಳಿದರು.
ರೈಸ್ ಮಿಲ್‌ಗಳಿಗೆ ನೀರಿನ ಪೈಪ್‌ಲೈನ್: ರಾಯಚೂರು ನಗರದಲ್ಲಿ 90 ಕ್ಕೂ ಹೆಚ್ಚು ರೈಸ್ಮಿಲ್ಗಳಿವೆ. ಈ ರೈಸ್‌ಮಿಲ್‌ಗಳ ನಿರ್ವಹಣೆಗಾಗಿ ನೀರಿನ ಅಗತ್ಯವಿದೆ. ಕೈಗಾರಿಕಾ ಪ್ರದೇಶಗಳಿಗೆ ಮೀಸಲಾದ ನೀರಿನ ಸಂಪರ್ಕ ಇಲ್ಲದಿರುವ ಕಾರಣ ರೈಸ್ ಮಿಲ್‌ಗಳು ತುಂಬ ಸಮಸ್ಯೆಗೆ ಸಿಲುಕಿವೆ. ಅಲ್ಲದೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈಸ್ ಮಿಲ್‌ಗಳನ್ನು ಸ್ಥಾಪಿಸಲು ನೀರಿನ ಅಗತ್ಯತೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ರೈಸ್ ಮಿಲ್ ಗಳಿಗೆ ಮೀಸಲಾದ ಪೈಪ್‌ಲೈನ್ ನಿರ್ಮಾಣದ ವರದಿಯನ್ನು ಸಲ್ಲಿಸುವಂತೆ ಸಚಿವ ಎಂ ಬಿ ಪಾಟೀಲ ಕೆಐಡಿಬಿ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ವಿಲೇವಾರಿ ಸೌಲಭ್ಯ ನಿರ್ಮಾಣಕ್ಕೆ ಆದ್ಯತೆ: ಔಷಧ ಕಂಪನಿಗಳ ಹಬ್ ಆಗಿ ಹೊರಹೊಮ್ಮಿರುವ ರಾಯಚೂರು ಕೈಗಾರಿಕಾ ಪ್ರದೇಶದಲ್ಲಿ ಸಿಇಟಿಪಿಯ ಕೊರತೆಯಿದೆ. ಇದರಿಂದಾಗಿ ತ್ಯಾಜ್ಯವು ಅಂತರ್ಜಲ ಸೇರ್ಪಡೆಯಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿ ಸೌಲಭ್ಯವನ್ನು ಅಳವಡಿಸುವ ಕಾರ್ಯ ವಿಳಂಬವಾಗಿರುವುದನ್ನು ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಕೂಡಲೇ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ನಿರ್ಮಿಸಬೇಕು. ಇದಕ್ಕೆ ಈಗಾಗಲೇ ಅನುಮತಿ ನೀಡಿರುವ ಮದರ್ ಅರ್ಥ್ ಕಂಪನಿಯ ಜೊತೆಯಲ್ಲಿ ಚರ್ಚಿಸಿ ಕೈಗಾರಿಕೋದ್ಯಮಿಗಳೀಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.