ಕರ್ನಾಟಕ

karnataka

ETV Bharat / state

ಅಪ್ರಾಪ್ತೆಯನ್ನು ವಿವಾಹವಾಗಿ ಸಮ್ಮತಿಯ ಲೈಂಗಿಕ ಸಂಪರ್ಕ: ಜಾಮೀನು ನಿರಾಕರಿಸಿದ ಹೈಕೋರ್ಟ್ - Sexual assault

ಅಪ್ರಾಪ್ತೆಯನ್ನು ಪ್ರೇಮ ವಿವಾಹವಾಗಿ ಸಮ್ಮತಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗೆ ಹೈಕೋರ್ಟ್​ ಜಾಮೀನು ನೀಡಲು ನಿರಾಕರಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Apr 4, 2023, 10:33 PM IST

ಬೆಂಗಳೂರು :ಹದಿನೆಂಟು ವರ್ಷದೊಳಗಿನ ಅಪಾಪ್ತರು ಪ್ರೀತಿ ವ್ಯವಹಾರ ನಡೆಸುವ ಅನುಮತಿ ಇರಬಹುದೇನೋ ಆದರೆ, ದೈಹಿಕ ಸಂಪರ್ಕ ಬೆಳೆಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅಪ್ರಾಪ್ತೆಯನ್ನು ಪ್ರೇಮ ವಿವಾಹವಾಗಿ ಸಮ್ಮತಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬುಜ್ಜಿ ಅಲಿಯಾಸ್ ಬಾಬು (23) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಪ್ರಕರಣ ಸಂಬಂಧ ಸ್ವಯಂ ಪ್ರಮಾಣಿಕೃತ ಹೇಳಿಕೆಯಲ್ಲಿ ಖುದ್ದು ಸಂತ್ರಸ್ತೆಯೇ, ಆರೋಪಿ ನನಗೆ ಮಂಗಳ ಸೂತ್ರ ಕಟ್ಟಿದ್ದ. ನಾವಿಬ್ಬರು ದಂಪತಿಯಂತೆ ಜೀವಿಸಿದ್ದು, ಸ್ವಯಿಚ್ಛೆ ಮೇರೆಗೆ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ತಿಳಿಸಿದ್ದರು. ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿದೆ.

ಅಲ್ಲದೆ, ಪೋಕ್ಸೋ ಕಾಯ್ದೆಯ ಪ್ರಕಾರ, 18 ವರ್ಷದೊಳಗಿನರು ಅಪ್ರಾಪ್ತರು. ಸಂತ್ರಸ್ತೆಯು 18 ವರ್ಷ ಒಳಗಿನವರೇ ಆಗಿದ್ದಾರೆ. ಅವರು ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದರೂ ಅದು ಸಮ್ಮತಿಯಾಗುವುದಿಲ್ಲ ಎಂದು ಪೋಕ್ಸೋ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ಅಪ್ರಾಪ್ತರು ಸಮ್ಮತಿ ಪಕ್ಷಕಾರರು ಆಗುವುದಿಲ್ಲ ಮತ್ತು ಅವರ ಸಮ್ಮತಿ ಒಪ್ಪಿತವಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಕಾನೂನು ಪ್ರಕಾರ, ಜಾಮೀನು ಅರ್ಜಿ ತೀರ್ಮಾನಿಸುವಾಗ ನ್ಯಾಯಾಲಯ ಪ್ರಕರಣದ ವಾಸ್ತವಾಂಶಗಳನ್ನು ಕಂಡುಹಿಡಿಯಲು ಸಣ್ಣ ಪ್ರಮಾಣದ ವಿಚಾರಣೆ ಮಾಡಲು ಸಾಧ್ಯವಿಲ್ಲ. ಅದು ಪ್ರಕರಣದ ವಿಚಾರಣೆ ಮೇಲೆ ಪೂರ್ವಾಗ್ರಹ ಬೀರಬಹುದು. ಸ್ವಯಂ ಪ್ರಮಾಣಿಕೃತ ಹೇಳಿಕೆಯನ್ನು ಪ್ರಕರಣದ ವಿಚಾರಣೆ ವೇಳೆ ಪರೀಕ್ಷೆಗೊಳಪಡಿಸಬೇಕು. ವಿಚಾರಣಾ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ ತೀರ್ಮಾನ ಕೈಗೊಳ್ಳುವರೆಗೂ ಯಾವುದೇ ನ್ಯಾಯಾಲಯಕ್ಕೆ ಪೋಕ್ಸೋ ಪ್ರಕರಣದಲ್ಲಿ ಅರ್ಜಿದಾರನ ಪಾತ್ರದ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ದೈಹಿಕ ಸಂಪರ್ಕ ಬೆಳೆಸಲು ಅನುಮತಿ ಎಂದಾದರೆ ಪೋಕ್ಸೋ ಕಾಯ್ದೆ ಜಾರಿ, ಪ್ರಕರಣ ದಾಖಲಾತಿ, ತನಿಖೆ ಮತ್ತು ವಿಚಾರಣೆ ನಡೆಸುವ ಉದ್ದೇಶವೇ ವಿಫಲವಾಗುತ್ತದೆ. ಈ ಉದ್ದೇಶವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ತೀರ್ಪು ಕೈಗೊಳ್ಳಬಾರದು. ಅರ್ಜಿದಾರನ ವಾದ ಒಪ್ಪಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ನಂತರ ಸಾಂದರ್ಭಿಕ ಸನ್ನಿವೇಶಗಳು ಸಕಾರಾತ್ಮಕವಾಗಿ ಬದಲಾವಣೆಯಾದರೆ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲು ಸ್ವತಂತ್ರನಿದ್ದಾನೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ನನ್ನ 16 ವರ್ಷದ ಮಗಳು (ಸಂತ್ರಸ್ತೆ) 2022 ರ ಏ. 2ರಂದು ಚರ್ಚ್‌ಗೆ ಹೋಗಿದ್ದಾಗ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಂತ್ರಸ್ತೆ ಮತ್ತು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಅಧೀನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಐಪಿಸಿ ಸೆಕ್ಷನ್‌ಗೆ ಸಂಬಂಧಿಸಿದ ಕೆಲ ಆರೋಪಗಳ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2022ರ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಆರೋಪಿಯು ಸಂತ್ರಸ್ತೆಯನ್ನು ನಂದಿಬೆಟ್ಟಕ್ಕೆ ಕರೆದೊಯ್ದಿದ್ದ. ಬೆಟ್ಟದ ಪ್ರವೇಶ ದ್ವಾರದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದು, ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. 2022 ರ ಏ. 4ರಂದು ಸಂತ್ರಸ್ತೆಯನ್ನು ಕರೆದೊಯ್ದಿದ್ದ ಆರೋಪಿ ಮತ್ತೊಬ್ಬ ಸಂಬಂಧಿಕರ ಮನೆಯನ್ನು ಬಾಡಿಗೆ ಪಡೆದು ನೆಲೆಸಿದ್ದ. ಏ . 3ರಂದು ಬೆಳಗ್ಗೆ 9ಕ್ಕೆ ಸಂತ್ರಸ್ತೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ತಾಳಿ ಕಟ್ಟಿ ಮದುವೆಯಾಗಿದ್ದ. ನಂತರ ಸತತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದ.

ಇದನ್ನೂ ಓದಿ :ಪ್ರೀತಿಸಿದವಳನ್ನು ಮದುವೆಯಾಗಲು ಅಪರಾಧಿಯನ್ನ ಪೆರೋಲ್ ಮೇಲೆ ಬಿಡುಗಡೆಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details