ಬೆಂಗಳೂರು:ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಹಿನ್ನೆಲೆ ಬೆಂಗಳೂರಿನಲ್ಲಿ ಇಂದು ಸಂಧಾನ ಸಭೆ ನಡೆದಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಭಾಗವಹಿಸಿದ್ದರು. ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಮನ್ವಯ ಮಾತುಕತೆ ನಡೆಸಿದ ಡಿಕೆಶಿ, ಸುದೀರ್ಘ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.
ಟಿಕೆಟ್ ತೀರ್ಮಾನದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಕೆಪಿಸಿಸಿ ಕಚೇರಿಗೆ ಆಗಮಿಸಿರುವ ಕಿಮ್ಮನೆ, ಮಂಜುನಾಥ್ ಗೌಡ ಬೆಂಬಲಿಗರು ತೀವ್ರ ಕುತೂಹಲದಿಂದ ಆಚೆಯೇ ಕಾದು ನಿಂತಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ತೀರ್ಥಹಳ್ಳಿ ಟಿಕೆಟ್ ಆಕಾಂಕ್ಷಿಗಳ ಸಂಧಾನ ಸಭೆ ನಡೆದು ಮುಕ್ತಾಯವಾಗಿದೆ. ಆದರೆ ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ.
ನನ್ನ ಡಿಮ್ಯಾಂಡ್ ನನಗೇ ಕೊಡ್ತಾರೆ: ಮೇಲ್ನೋಟಕ್ಕೆ ಕಿಮ್ಮನೆ ರತ್ನಾಕರ್ಗೆ ಟಿಕೆಟ್ ತಪ್ಪಿದ್ದು, ಮಂಜುನಾಥ್ ಗೌಡ ಪಾಲಿಗೆ ಟಿಕೆಟ್ ಉಳಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಭೆ ಬಳಿಕ ತೀರ್ಥಹಳ್ಳಿ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಗೌಡ ಮಾತನಾಡಿ, ಒಬ್ಬರಿಗೆ ವಿಧಾನಸಭೆ, ಒಬ್ಬರಿಗೆ ವಿಧಾನ ಪರಿಷತ್ ಅಂತಾ ಹೇಳಿದರು. ಇಬ್ಬರೂ ಒಗ್ಗಟ್ಟಾಗಿ ಹೋಗಿ ಎಂದಿದ್ದಾರೆ. ನನ್ನ ಡಿಮ್ಯಾಂಡ್ ನನಗೇ ಟಿಕೆಟ್ ಕೊಡ್ತಾರೆ ಎಂದುಕೊಂಡಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೆಲಸ ಮಾಡಿ ಎಂದಿದ್ದಾರೆ.