ಬೆಂಗಳೂರು: ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪಾ ಅಮರನಾಥ್ ಪರ ಅವರ ಬೆಂಬಲಿಗರು ಲಾಬಿ ಆರಂಭಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪುಷ್ಪಾ ಅಮರನಾಥ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಿಸಬೇಕು ಎಂದು ಕೆಲ ಮಹಿಳಾ ನಾಯಕಿಯರು ಹಾಗೂ ಕಾರ್ಯಕರ್ತರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು.
ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಕಾರ್ಯಕರ್ತೆಯರು ಪುಷ್ಪಾ ಅಮರನಾಥ್ ಏಕಾಏಕಿ ಪದಾಧಿಕಾರಿಗಳನ್ನು ಬದಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಗಮನಕ್ಕೆ ತರದೆ ಬದಲಾವಣೆಗಳನ್ನು ಮಾಡಿದ್ದಾರೆ. ಅಲ್ಲದೆ ಇವರ ಅವಧಿ ಸಹ ಮುಕ್ತಾಯವಾಗಿದ್ದು, ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸುವಂತೆ ಮನವಿ ಮಾಡಿದ್ದರು. ಕಾರ್ಯಕರ್ತೆಯರ ಮನವಿ ಸ್ವೀಕರಿಸಿದ್ದ ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿ ಕಳುಹಿಸಿದ್ದರು.
ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಕಾಂಗ್ರೆಸ್ ಸದಸ್ಯರು ಇಂದು ಬೆಳಗ್ಗೆ ಸಿದ್ದರಾಮಯ್ಯ ತಮ್ಮ ಸರ್ಕಾರಿ ನಿವಾಸದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸುವ ಮುನ್ನ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಬಳಿ ಪುಷ್ಪಾ ಅಮರನಾಥ ಪರ ಲಾಬಿ ನಡೆಸಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸಮರ್ಥವಾಗಿ ಕೆಲಸ ಮಾಡ್ತಿದ್ದಾರೆ. ಪುಷ್ಪಾ ಅಮರನಾಥ್ ಅವರನ್ನೇ ಮುಂದುವರಿಸುವಂತೆ ಸಿದ್ದರಾಮಯ್ಯಗೆ ಪಟ್ಟು ಹಿಡಿದರು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತೆಯರು ಸಿದ್ದರಾಮಯ್ಯ ಬಳಿ ಸುದೀರ್ಘ ಸಮಾಲೋಚನೆ ನಡೆಸಿದರು. ಎಲ್ಲರ ಮಾತನ್ನು ಆಲಿಸಿದ ಸಿದ್ದರಾಮಯ್ಯ ಎಲ್ಲ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಹೇಳಿ ಕಳುಹಿಸಿದ್ದಾರೆ.
ಸೆಲ್ಫಿ ಕ್ರೇಜ್:ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಪರ ಲಾಬಿ ಮಾಡಲು ಬಂದಿದ್ದ ಕಾರ್ಯಕರ್ತೆಯರು ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಿಶೇಷ ಆಸಕ್ತಿ ತೋರಿಸಿದ್ದು ಕಂಡು ಬಂತು. ಶಿವಮೊಗ್ಗಾಗೆ ತೆರಳುವ ಅವಸರದಲ್ಲಿದ್ದರೂ ಸಹ ಸಿದ್ದರಾಮಯ್ಯ ಸಾಕಷ್ಟು ಸಮಯ ಸೆಲ್ಫಿಗೆ ಫೋಸ್ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಸಾಕಷ್ಟು ಸಂದರ್ಭಗಳಲ್ಲಿ ಫೋಟೋ ತೆಗೆಸಿಕೊಳ್ಳುವವರ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಮೂಲಜಿಗೆ ಒಳಗಾಗುವುದು ಕಾಣ ಸಿಗುತ್ತದೆ.
ಇದನ್ನೂ ಓದಿ:ವಾಕಿಂಗ್ ವೇಳೆ ಸಿದ್ದರಾಮಯ್ಯ ಭೇಟಿಯಾದ ಭೋವಿ ಸಮುದಾಯದ ಮುಖಂಡರು : ಕೋಲಾರಕ್ಕೆ ಬರುವಂತೆ ಒತ್ತಾಯ