ಬೆಂಗಳೂರು: ವಿಧಾನಸೌಧದಲ್ಲಿಯೇ ಅಶ್ಲೀಲ ಚಿತ್ರ ವೀಕ್ಷಣೆ ಆರೋಪ ಹೊತ್ತಿರುವ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ಕೈಬಿಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದ ಸದಸ್ಯರು, ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿ ರಾಜ್ಯ ಸರ್ಕಾರ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತಾನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಪ್ಪಾ ಅಮರನಾಥ್, ಲಕ್ಷ್ಮಣ ಸವದಿ ಅವರ ಮೇಲೆ ಅಶ್ಲೀಲ ಚಿತ್ರ ವೀಕ್ಷಿಸಿದ ಗಂಭೀರ ಆರೋಪ ಇದೆ. ಇಂತಹ ವ್ಯಕ್ತಿಗೆ ರಾಜ್ಯದ ಪ್ರಮುಖ ಸ್ಥಾನ ನೀಡಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಈ ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಿಂದ ಅವದಿ ಅವರನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಲಕ್ಷ್ಮಣ ಸವದಿ ಅವರಿಗೆ ಉನ್ನತ ಸ್ಥಾನ ನೀಡಿರುವುದನ್ನು ಬಿಜೆಪಿ ಮಹಿಳಾ ನಾಯಕಿಯರಾದ ಶೋಭಾ ಕರಂದ್ಲಾಜೆ, ಮಾಳವಿಕಾ, ತಾರಾ, ಶೃತಿ, ಭಾರತಿ ಶೆಟ್ಟಿ ಖಂಡಿಸಬೇಕು. ಇಲ್ಲದಿದ್ದರೆ ನಾವು ಹೋರಾಟ ಚುರುಕುಗೊಳಿಸುತ್ತೇವೆ. ಪ್ರತಿಯೊಂದಕ್ಕೂ ಕಾಂಗ್ರೆಸ್ ಮಹಿಳಾ ಘಟಕವೇ ಮುಂದೆ ಬರಬೇಕಾ ಅಂತ ಪ್ರಶ್ನಿಸಿದರು.