ಬೆಂಗಳೂರು:ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹುಟ್ಟುಹಬ್ಬವನ್ನು ನಗರದಲ್ಲಿ ಆಚರಿಸಲಾಯಿತು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯರು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ವೇಳೆ ಕೇಕ್ ಕತ್ತರಿಸುವ ಮೂಲಕ ಪ್ರಿಯಾಂಕ ಗಾಂಧಿ ಹುಟ್ಟುಹಬ್ಬ ಆಚರಿಸಿ ಶುಭಾಶಯ ಸಲ್ಲಿಸಲಾಯಿತು.
ಜನವರಿ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ 'ನಾ ನಾಯಕಿ' ಕಾರ್ಯಕ್ರಮದಲ್ಲಿ ಪ್ರಿಯಾಂಕ ಗಾಂಧಿ ಪಾಲ್ಗೊಳ್ಳುತ್ತಿದ್ದು, ಈ ವಿಚಾರವನ್ನು ವಿವರಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹುಟ್ಟು ಹಬ್ಬದ ಸಂಭ್ರಮವನ್ನೂ ಆಚರಿಸಲಾಯಿತು. ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ ಗಾಂಧಿ ಅವರ ಬಳಿ ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವಾಗ ಕಾಂಗ್ರೆಸ್ ಪಕ್ಷದ ಮಹಿಳಾ ಪ್ರತಿನಿಧಿಗಳಿಗೆ ಹೆಚ್ಚಿನ ಅವಕಾಶ ನೀಡುವಂತೆ ಕೋರುವ ತೀರ್ಮಾನ ಪ್ರಕಟಿಸಲಾಯಿತು.
ಒಟ್ಟಾರೆ ’ನಾ ನಾಯಕಿ’ ಕಾರ್ಯಕ್ರಮ ತಮ್ಮ ಮನವಿ ಸಲ್ಲಿಕೆಗೆ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮೂಲಕವೇ ಕೇಕ್ ಕತ್ತರಿಸುವ ಆಶಯ ಮಾತ್ರ ಈಡೇರಲಿಲ್ಲ. ಕೆಪಿಸಿಸಿ ಕಚೇರಿಯಲ್ಲಿ ಇದ್ದ ಡಿಕೆ ಶಿವಕುಮಾರ್ ಅವರನ್ನು ಈ ಕತ್ತರಿಸಲು ಆಹ್ವಾನಿಸಲಾಯಿತು. ಆದರೆ ಬೇರೆ ಕಾರ್ಯದಲ್ಲಿ ನಿರತರಾಗಿದ್ದ ಹಿನ್ನೆಲೆ ಆಗಮನ ಸಾಧ್ಯವಾಗಲಿಲ್ಲ.
ಮಹಿಳಾ ಮೀಸಲಾತಿ:ಇದೆ ವೇಳೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ವತಹ ಟಿಕೆಟ್ ಆಕಾಂಕ್ಷಿ ಆಗಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ. ಪುಷ್ಪ ಅಮರನಾಥ್ ಮಾತನಾಡಿ, 109 ಮಹಿಳೆಯರಿಂದ ಅರ್ಜಿ ಬಂದಿವೆ. 74 ಕ್ಷೇತ್ರಗಳಿಗೆ ಟಿಕೆಟ್ ಬಯಸಿದ್ದಾರೆ. 30 ಹೆಣ್ಣುಮಕ್ಕಳಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದೇವೆ. ಗೆಲ್ಲುವುದೇ ಮಾನದಂಡವಾಗಿದೆ. ಮಹಿಳಾ ಮೀಸಲಾತಿ ಜೊತೆಗೆ ರಾಜಕೀಯ ಮೀಸಲಾತಿಯನ್ನು ತರಬೇಕು. ಬಿಲ್ ಪಾಸ್ ಆದ್ರೆ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಬಿಜೆಪಿ ಸರ್ಕಾರ ಆ ಬಿಲ್ ಪಾಸ್ ಮಾಡಬೇಕು. ಹಾಗಾದಾಗ ಮಾತ್ರ ಹೆಣ್ಣು ಮಕ್ಕಳಿಗೆ ಕಡ್ಡಾಯ ಟಿಕೆಟ್ ಸಿಗಲಿದೆ ಎಂದರು.
ಜಯನಗರ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ದಿನಾಂಕ 16 ರಂದು ಪ್ರಿಯಾಂಕಾ ಗಾಂಧಿ ಅವರು ಬರುತ್ತಿದ್ದು, ನಾ ನಾಯಕಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವಿಲ್ಲ. ಇದು ಪುರುಷ ಪ್ರಧಾನ ಸಮಾಜ . ನನ್ನ ಕ್ಷೇತ್ರದಲ್ಲಿಯೂ ನಾಲ್ಕು ಜನ ಮಹಿಳಾ ಕಾರ್ಪೊರೇಟರ್ ಇದ್ದಾರೆ ಎಂದು ಹೇಳಿದರು.
25 ವರ್ಷ ಆಗಿದೆ ಮಹಿಳಾ ಮೀಸಲಾತಿ ಬಿಲ್ ಜಾರಿಯಾಗಿ. ಬಿಜೆಪಿ ಪಕ್ಷ ಇದಕ್ಕೆ ಒತ್ತು ಕೊಡುತ್ತಿಲ್ಲ ಬಿಲ್ಲ ಕಾಯ್ದೆ ಮಾಡುತ್ತಿಲ್ಲ. ಬಿಜೆಪಿ ಅವರು ಹೇಳ್ತಾರೆ ಮಹಿಳೆಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ ಅಂತಾರೆ. ಆದರೆ ಮಹಿಳಾ ಮೀಸಾಲತಿ ಕಾಯ್ದೆ ಜಾರಿ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಭೇಟಿ ಬಚಾವೋ ಬೇಟಿ ಪಡಾವೋ ಅಂತಾರೆ. ಒಂದ ಕಡೆ ಮಹಿಳಾ ಕಾಲೇಜ್ನಲ್ಲಿ ಶೋಷಣೆಯಾಗುತ್ತಿವೆ. ಬಿಜೆಪಿ ಸರ್ಕಾರ ಎಲ್ಲಿ ಎಲ್ಲಿ ಇದೇಯೋ ಅಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಟಿಕೆಟ್ ವಿಚಾರ ಅಳಲು ತೋಡಿಕೊಂಡ ಕೈ ನಾಯಕಿಯರು:ಕಾಂಗ್ರೆಸ್ ಹಿರಿಯ ನಾಯಕಿ ಮಲ್ಲಾಜಮ್ಮ ಮಾತನಾಡಿ, ವೇದಿಕೆ ಮೇಲೆ ಕುಳಿತ ನಾನು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರರಾದ ಪುಪ್ಪ ಅಮರ್ ನಾಥ್, ಉಮಾಶ್ರೀ, ಎಲ್ರೂ ಟಿಕೆಟ್ ಆಕಾಂಕ್ಷಿಗಳು. ಟಿಕೆಟ್ಗಾಗಿ ನಮ್ಮ ನಾಯಕರನ್ನು ಕೇಳಲು ಹೋಗಬೇಕಾಗತ್ತೆ. ನಮ್ಮ ಸಾಮರ್ಥ್ಯವನ್ನು ಅವರ ಮುಂದೆ ಹೇಳಬೇಕಾಗುತ್ತೆ. ನಮ್ಮ ಸೇವೆ ನೋಡಿ, ಹಾರ್ಡ್ ವರ್ಕ್ ನೋಡಿ ಟಿಕೆಟ್ ಕೊಡಿ ಅಂತ ಕೇಳಬೇಕಾಗತ್ತೆ ಎಂದು ಹೇಳಿದರು. ಬಳಿಕ ಮಾಧ್ಯಮದವರು ನಮ್ಮ ಪರವಾಗಿ ಇದ್ದೀರಾ ಅಂತ ಗೊತ್ತಾಯ್ತು. ನಮ್ಮ ಪರವಾಗಿ ನಮ್ಮ ಕೆಪಿಸಿಸಿ ಅಧ್ಯಕ್ಷರನ್ನು, ಸಿದ್ದರಾಮಯ್ಯ ಅವರನ್ನು, ಎಐಸಿಸಿ ಅಧ್ಯಕ್ಷರನ್ನು ಕೇಳಿ, ನಾವು ಬಡಪಾಯಿಗಳು, ನಮ್ಮ ಹತ್ತಿರ ಕೇಳಿದರೆ ನಾವೇನು ಹೇಳೋಣ ಎಂದರು.
ಉತ್ತರ ಪ್ರದೇಶದಲ್ಲಿ ಈಗಾಗಲೇ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇಕಡ 40 ರಷ್ಟು ಮಹಿಳೆಯರಿಗೆ ಅವಕಾಶ ನೀಡಿತ್ತು. ರಾಜ್ಯದಲ್ಲಿ ಇಂತಹ ಅವಕಾಶ ನೀಡಿಕೆ ಆಗಬೇಕು ಎಂದು ಕಾಂಗ್ರೆಸ್ ನಾಯಕಿಯರು ಮನವಿ ಮಾಡಿದರು. ಇದಕ್ಕೆ ಎಷ್ಟರಮಟ್ಟಿನ ಬೆಂಬಲ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ :’ನಾ ನಾಯಕಿ’ ಉದ್ಘಾಟನೆಗೆ ಪ್ರಿಯಾಂಕಾ ಗಾಂಧಿ: ಕೈ ಪಡೆಯಲ್ಲಿ ಸಂಚಲನ