ಬೆಂಗಳೂರು: ಮೇ 26ಕ್ಕೆ 6 ತಿಂಗಳು ಪೂರೈಸಲಿರುವ ರೈತ ಹೋರಾಟದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗು ರಾಜ್ಯ ರೈತಸಂಘದ ಕರೆಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಸುದೀರ್ಘ ರೈತ ಹೋರಾಟ ಮೇ 26ಕ್ಕೆ ಆರು ತಿಂಗಳು ಪೂರೈಸಲಿದ್ದು, ಈ ರೈತ ಆಂದೋಲನದಲ್ಲಿ ಭಾಗವಹಿಸಿರುವ ರೈತ ಸಂಘಟನೆಗಳು ಮೇ 26ರ ದಿನವನ್ನು 'ಕರಾಳ ದಿನ'ವನ್ನಾಗಿ ಆಚರಿಸಲು ಕರೆ ನೀಡಿವೆ.
ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಹಾಗೂ ರೈತ ಹೋರಾಟಗಾರರೊಂದಿಗೆ ಮಾತುಕತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು. 'ಮೋದಿ ಸರ್ಕಾರವು ಆ ಸೂಕ್ಷ್ಮತೆಯಿಂದ ವರ್ತಿಸುತ್ತಿದ್ದು, ರೈತರ ಸಮಸ್ಯೆಗಳನ್ನು ಆಲಿಸದೇ ಇರುವುದು ಖಂಡನೀಯ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆಗಳು ರದ್ದಾಗಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ದಿಟ್ಟ ನಿರ್ಧಾರದೊಂದಿಗೆ ಆಂದೋಲನ ದೆಹಲಿಯಲ್ಲಿ ಮುಂದುವರೆಸಿದ್ದಾರೆ. ರಾಜ್ಯಾದ್ಯಂತ ಕಿಸಾನ್ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಮನೆಯ ಬಳಿ ಮೇ 26ಕ್ಕೆ ಮಧ್ಯಾಹ್ನ 12ಕ್ಕೆ ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ದಿನವನ್ನು ಆಚರಿಸುವಂತೆ ಹಾಗೂ ದೇಶಾದ್ಯಂತ ರೈತ ಹೋರಾಟದ ನಡುವೆ ಹುತಾತ್ಮರಾದ ನಾಯಕರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.