ಬೆಂಗಳೂರು:ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಅವರು ದೊಡ್ಡ ಅಕ್ರಮ ಎಸಗಿದ್ದಾರೆ. ಅಲ್ಲದೆ, ಜಾತಿ ಆಧಾರದಲ್ಲಿ ಸಿಎಂ ಮತ ಕೇಳ್ತಿದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಥೋಡ್ ರಾಜಭವನದ ಬಾಗಿಲು ತಟ್ಟಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ನಡೆಸುತ್ತಿರುವ ಚುನಾವಣಾ ಅಕ್ರಮ ಹಾಗೂ ನೀತಿಸಂಹಿತೆ ಉಲ್ಲಂಘನೆಯನ್ನು ತಡೆಯಬೇಕು ಹಾಗೂ ಇದನ್ನು ಕಂಡೂ ಕಾಣದಂತೆ ನಡೆದುಕೊಳ್ಳುತ್ತಿರುವ ಚುನಾವಣಾ ಆಯೋಗದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲು ರಾಜಭವನಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ರು.
ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ದೂರು ಸಲ್ಲಿಸಲು ಇಂದು ಆಗಮಿಸಿದ್ದೆವು. ರಾಜ್ಯಪಾಲ ವಾಜುಭಾಯಿ ವಾಲಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಅವರನ್ನು ಹಾಗೂ ಸಂಬಂಧಿಸಿದ ಅಧಿಕಾರಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ರಾಜಭವನ ಟಪಾಲು ವಿಭಾಗದಲ್ಲಿ ನಮ್ಮ ದೂರನ್ನು ಸಲ್ಲಿಸಿ ಬಂದಿದ್ದೇವೆ. ರಾಜ್ಯಪಾಲರಿಂದ ನಮ್ಮ ಮನವಿಗೆ ಸ್ಪಂದನೆ ಸಿಗುವ ಎಂಬ ವಿಶ್ವಾಸ ಇದೆ ಎಂದು ರಾಥೋಡ್ ಹೇಳಿದ್ರು.