ಕರ್ನಾಟಕ

karnataka

ETV Bharat / state

ಕರ್ನಾಟಕವನ್ನು ಕಾಂಗ್ರೆಸ್​ ಎಟಿಎಂ ಮಾಡಿಕೊಳ್ಳಲಿದೆ: ಅಮಿತ್ ಶಾ ವಾಗ್ದಾಳಿ

''ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಳ್ಳಲು ಬಯಸಿದೆ. ಅವರ ಇತಿಹಾಸವೇ ಭ್ರಷ್ಟಾಚಾರದ ಇತಿಹಾಸ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಕ್​ ಸಮರ ನಡೆಸಿದರು.

Union Home Minister Amit Shah
ಕೇಂದ್ರ ಗೃಹ ಸಚಿವ ಅಮಿತ್ ಶಾ

By

Published : Mar 24, 2023, 6:08 PM IST

ಕೊಮ್ಮಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು:ಕಾಂಗ್ರೆಸ್‌ಗೆ ಎಟಿಎಂ ಮಾತ್ರ ಬೇಕಿದೆ. ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಳ್ಳಲು ಬಯಸಿದೆ. ಅವರ ಇತಿಹಾಸವೇ ಭ್ರಷ್ಟಾಚಾರದ ಇತಿಹಾಸ. ಆದರೆ, ಅಭಿವೃದ್ಧಿ ಪರ ಸರ್ಕಾರ ಪ್ರಧಾನಿ ಮೋದಿ ಕನಸಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.

ಕೊಮ್ಮಘಟ್ಟದಲ್ಲಿ ಸಹಕಾರ ಸಮೃದ್ಧಿ ಸೌಧಕ್ಕೆ ಶಿಲಾನ್ಯಾಸ ಸೇರಿದಂತೆ 800 ಕೋಟಿ ಮೊತ್ತದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರದ ಪಿತಾಮಹ ಶಿದ್ದನಗೌಡ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

''ದೇಶದ ಸಹಕಾರ ಇಲಾಖೆಯ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 1,400 ಕೋಟಿ ಯೋಜನೆಯ ವಿವಿಧ ಕಾರ್ಯಕ್ರಮ ಒಂದೇ ಬಾರಿ ಮಾಡಿದ್ದಾರೆ. 10 ಕೋಟಿ ವೆಚ್ಚದ ಎಪಿಎಂಸಿ ಮಾರುಕಟ್ಟೆ ಮಾಡಿದ್ದಾರೆ. ಪಾರ್ಕಿಂಗ್, ಸುಸಜ್ಜಿತ ಮಾರುಕಟ್ಟೆ ಆರಂಭವಾಗಿದೆ. ಸೋಲಾರ್ ಪ್ಲಾಂಟ್, 95 ಕೋಟಿ ವೆಚ್ಚದ ಪಶುಪಾಲನೆ ಯೋಜನೆ, ಹೊಸ ಆಕ್ಸಿಜನ್ ಪ್ಲಾಂಟ್ ಆರಂಭಿಸಲಾಗಿದೆ. 200 ಕೋಟಿ ವೆಚ್ಚದಲ್ಲಿ ಯುಜಿಡಿ ಯೋಜನೆ ಸೇರಿದಂತೆ ಯಶವಂತಪುರದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಆರಂಭಿಸಿದ್ದಾರೆ'' ಎಂದು ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

''ಮೋದಿಯವರ ಕನಸಿನಂತೆ ಮೊದಲ ಬಾರಿ ಸಹಕಾರ ಇಲಾಖೆ ಆರಂಭವಾಗಿದೆ. ಆರ್ಗ್ಯಾನಿಕ್ ಆಹಾರ ಪದಾರ್ಥಗಳ ತಯಾರಿ ಸೇರಿದಂತೆ ಹಲವು ಯೋಜನೆಗಳ ಕನಸು ಮೋದಿಯವರದ್ದಾಗಿದೆ. ಅದನ್ನು ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ ಯಶಸ್ವಿಯಾಗಿ ತೆಗೆದುಕೊಂಡು ಹೋಗುತ್ತಿದೆ'' ಎಂದು ರಾಜ್ಯ ಸರ್ಕಾರವನ್ನು ಅವರು ಹೊಗಳಿದರು.

''ಇಡೀ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ದೇಶದ ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆಯೋ ಆ ರಾಜ್ಯ ಕಾಂಗ್ರೆಸ್​ನ ಖಜಾನೆಯಾಗಲಿದೆ. ಅದೇ ರೀತಿ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ ಬಯಸಿದೆ. ಹಾಗಾಗಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಬೇಕಾ? ರಾಹುಲ್ ಗಾಂಧಿ ನೇತೃತ್ವದ ಸರ್ಕಾರ ರಚನೆಯಾಗಬೇಕಾ? ಎನ್ನುವುದು ನೀವೇ ನಿರ್ಧಾರ ಮಾಡಿ'' ಎಂದರು.

ಕಾಂಗ್ರೆಸ್​ನದ್ದು ಭ್ರಷ್ಟಾಚಾರದ ಇತಿಹಾಸ:ಕಾಂಗ್ರೆಸ್​ನ ಇತಿಹಾಸವೇ ಭ್ರಷ್ಟಾಚಾರದ ಇತಿಹಾಸವಾಗಿದೆ. ಅವರು ಯಾವಾಗೆಲ್ಲಾ ಅಧಿಕಾರಕ್ಕೆಲ್ಲಾ ಬಂದಿದ್ದಾರೋ ಆಗೆಲ್ಲಾ ದಲಿತರನ್ನ, ಅಶಕ್ತರನ್ನ ತುಳಿಯುವ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರ ಪೋಷಿಸುವ ಕೆಲಸ ಮಾಡಿದ್ದಾರೆ. ಮೋದಿ ಇತ್ತೀಚೆಗೆ ಪಿಎಫ್ಐ ನಿಷೇಧ ಮಾಡಿದರು. ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮೇಲಿನ ಕೇಸ್ ಈ ಹಿಂದೆ ವಾಪಸ್ ಪಡೆಯಿತು. ಆದರೆ ಮೋದಿ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದರು. ದಕ್ಷಿಣ ಭಾರತವನ್ನು ಆತಂಕವಾದಿಗಳಿಂದ ಸುರಕ್ಷಿತ ಮಾಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ ಎಂದರು.

ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು?:ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸದೃಢ ಸರ್ಕಾರಕ್ಕೆ ಡಬಲ್ ಇಂಜಿನ್ ಸರ್ಕಾರ ಬರಬೇಕು ಅಂತ ಅಮಿತ್ ಶಾ ಹೇಳಿದ್ದಾರೆ. ಯಶಸ್ವಿನಿ ಯೋಜನೆ 300 ಕೋಟಿಯಲ್ಲಿ ಮಾಡಿರುವುದು ನಮ್ಮ ಸರ್ಕಾರ. ಬೀಜ, ಗೊಬ್ಬರಕ್ಕೆ 10 ಸಾವಿರ ಕೊಡುವ ಭೂ ಸಿರಿ ಯೋಜನೆ ನೀಡಿದ್ದೇವೆ. ಸೋಮಶೇಖರ್ ಅವರು ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದಾರೆ. ರಸ್ತೆ, ಆಸ್ಪತ್ರೆ, ಕುಡಿಯುವ ನೀರು ಯೋಜನೆ ತಂದಿದ್ದಾರೆ. ಸೋಮಣ್ಣನ ಮೇಲೆ ನಿಮ್ಮೆಲ್ಲರ ಸಹಕಾರ ಇರಲಿ. ಜಾತಿ, ಮತ ಲೆಕ್ಕಾಚಾರ ಇಲ್ಲದೆ, ಸಂಕಷ್ಟ ಸಮಯದಲ್ಲಿ ಆದವರಿಗೆ ಬೆಂಬಲ ನೀಡಬೇಕು. ಇಡೀ ಕರ್ನಾಟಕದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಅಭಿವೃದ್ಧಿ ಸರ್ಕಾರ ನೀವು ತರಬೇಕು ಎಂದು ಕರೆ ನೀಡಿದರು.

ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು

ಮಾಜಿ ಸಿಎಂ ಬಿಎಸ್​ವೈ ಮಾತನಾಡಿದ್ದೇನು?:''ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಥಮ ಬಾರಿಗೆ ಸಹಕಾರಿ ವಲಯ ಸೃಷ್ಟಿಸಿ ಇಂತಹ ಕಾರ್ಯಕ್ರಮ ರೂಪಿಸಿಗಿದೆ. ಸಹಕಾರಿ ತತ್ವ ನಮ್ಮಂತ ಅಭಿವೃದ್ಧಿಶೀಲ ರಾಷ್ಟ್ರದ ಬೆನ್ನೆಲುಬು. ನಮ್ಮನ್ನು ನಾವು ಮರೆತು ವ್ಯವಹಾರಿಕವಾಗಿ ಎಲ್ಲವನ್ನೂ ನೋಡಲು ಆರಂಭಿಸುತ್ತೇವೋ ಆಗ ಬೆಳವಣಿಗೆ ಕುಂಠಿತ ಆಗಲಿದೆ. ಅನೇಕ ಬ್ಯಾಂಕುಗಳು ದಿವಾಳಿ ಆಗಿವೆ. ಆದರೆ, ಸಹಕಾರಿ ಇಲಾಖೆಯ ಬ್ಯಾಂಕುಗಳು ದಿವಾಳಿ ಆಗಿರೋದು ಕಡಿಮೆ. ಸಹಕಾರ ಇಲಾಖೆ ಜನರನ್ನು ನೇರವಾಗಿ ತಲುಪುವ ಇಲಾಖೆ. ಜನಸಾಮಾನ್ಯರ ಬವಣೆಯನ್ನು ನೇರವಾಗಿ ಬಗೆಹರಿಸಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಸ್ವಸಹಾಯ ಗುಂಪುಗಳಿಗೆ ಚೆಕ್ ವಿತರಿಸಿ ಫಲ ನೀಡುವ ಕೆಲಸ ಮಾಡಿದ್ದೇವೆ. ಹೊಸ 20 ಅಂಶಗಳ ಯೋಜನೆ ಜಾರಿಗೊಳಿಸಲಾಗಿದೆ. ಸೋಮಶೇಖರ್ ಅವರು, ಯಶವಂತಪುರ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಅಭಿವೃದ್ಧಿಗಾಗಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಅವರನ್ನು ನೀವೆಲ್ಲ ಮತ್ತೆ ಬೆಂಬಲಿಸಬೇಕು ಎಂದು ಸೋಮಶೇಖರ್ ಪರ ಬಿಎಸ್​ವೈ ಬ್ಯಾಟಿಂಗ್​ ಮಾಡಿದರು.

ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ''ಪ್ರತಿಯೊಂದು ಯೋಜನೆ ಫಲಾನುಭವಿಗಳಿಗೆ ಸಿಗಬೇಕು. ಅದಕ್ಕಾಗಿ ರಾಜ್ಯಾದ್ಯಂತ ಎಲ್ಲರಿಗೂ ದೊರೆಯುವ ಫಲಾನುಭವಿ ಸಮಾವೇಶ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದ ಎಲ್ಲಾ ಯೋಜನೆ ಜನರಿಗೆ ತಲುಪಬೇಕು. ಎರಡು ಜಿಲ್ಲೆ ಹೊರತುಪಡಿಸಿದರೆ, ಎಲ್ಲೆಡೆ ಸಮಾವೇಶ ನಡೆದಿದೆ'' ಎಂದರು. ನಂತರ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸೋಮಶೇಖರ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಚೆಕ್ ವಿತರಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಬಿಎಸ್​ವೈ:ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ ನಂತರ, ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಉಳಿದು ಕೇವಲ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ಮೊದಲ ಬಾರಿ ಮಾಜಿ ಸಿಎಂ ಆಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದನ್ನೂ ಓದಿ:ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಮೋದಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ: ಸಿದ್ದರಾಮಯ್ಯ

ABOUT THE AUTHOR

...view details