ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ರಾಜಕೀಯ ಏಳಿಗೆ ಸಹಿಸದ ಕಾಂಗ್ರೆಸ್ ಕೆಲ ಮುಖಂಡರು, ಚುನಾವಣಾ ಟೂಲ್ಕಿಟ್ ಭಾಗವಾಗಿ ವೀರಶೈವ ಲಿಂಗಾಯತರ ವಿರುದ್ಧ ಸಿಟಿ ರವಿ ಮಾತನಾಡಿದ್ದಾರೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಮುಖಂಡರು ಹತಾಶೆರಾಗಿ ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ನ ಸಾಮಾಜಿಕ ಜಾಲತಾಣದಲ್ಲಿಯೂ ಅದನ್ನು ಪ್ರಚಾರ ಮಾಡುತ್ತಿದ್ದಾರೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಆ ಕಾಂಗ್ರೆಸ್ ಮುಖಂಡರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಅಭಿಮತ ವ್ಯಕ್ತಪಡಿಸಿದರು.
ಸಿಟಿ ರವಿ ಏಳಿಗೆ ಸಹಿಸದ ಕಾಂಗ್ರೆಸ್ನಿಂದ ಸುಳ್ಳು ಸುದ್ದಿ:ಚುನಾವಣೆ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ನ ಟೂಲ್ ಕಿಟ್ ಇರಲಿದೆ. ಇಲ್ಲಿಯೂ ಕೂಡ ಸಿಟಿ ರವಿ ಲಿಂಗಾಯತರ ವಿರುದ್ಧವಾಗಿ ಮಾತನಾಡಿಲ್ಲ. ಎಲ್ಲಾದರೂ ಅವರು ಹಾಗೆ ಮಾತನಾಡಿದ್ದರೆ ಮೊದಲು ಮಾಧ್ಯಮಗಳಿಗೆ ಸಿಗಬೇಕಿತ್ತು. ಒಂದು ವೇಳೆ ಆ ವಿಡಿಯೋ ಇದ್ದರೆ ಈಗಲೂ ಪ್ರಚಾರ ಮಾಡಬಹುದು. ಆದರೆ, ಇಲ್ಲಿ ಕೇವಲ ಸಿಟಿ ರವಿ ಏಳಿಗೆ ಸಹಿಸದೇ ಅವರಿಗೆ ಮತ್ತು ಪಕ್ಷಕ್ಕೆ ಕಳಂಕ ತರಲು ಚುನಾವಣೆ ವೇಳೆಯಲ್ಲಿ ಟೂಲ್ ಕಿಟ್ ಆಗಿ ಕಾಂಗ್ರೆಸ್ ನವರು ಈ ವಿಷಯವನ್ನು ಬಳಸುತ್ತಿದ್ದಾರೆ. ಅವರ ಯೋಗ್ಯತೆ ಎಲ್ಲಿಗೆ ಇಳಿದಿದೆ ಎನ್ನುವುದನ್ನು ಇದರಿಂದ ಮನಗಾಣಬಹುದು ಎಂದು ಟೀಕಿಸಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಡೆಯಲ್ಲ:ಕಾಂಗ್ರೆಸ್ ಅನೇಕ ಗ್ಯಾರಂಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಯಲ್ಲಿ 10ಕೆಜಿ ಅಕ್ಕಿ ಅಂತೆ, ಮಹಿಳೆ ಮುನ್ನಡೆಸುವ ಕುಟುಂಬಕ್ಕೆ 2000 ಹಣ ಅಂತೆ, ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಫ್ರೀ ಅಂತೆ. ಇದೆಲ್ಲಾ ಕೊಡುವುದಕ್ಕೆ ಆಗುತ್ತಾ? ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದೆಲ್ಲ ಕೊಟ್ಟಿದ್ದಾರಾ..? ಕಾಂಗ್ರೆಸ್ ಟೋಲ್ ಕಿಟ್ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.