ಕರ್ನಾಟಕ

karnataka

ETV Bharat / state

ಬೆಂಗಳೂರು ಬಡಾವಣೆಗಳ ಮುಳುಗಡೆಗೆ ಕಾಂಗ್ರೆಸ್ ಯೋಜನಾ ರಹಿತ ಆಡಳಿತ ಕಾರಣ: ಸಿಎಂ ಆರೋಪ

ಕೆರೆಯ ಸುತ್ತಮುತ್ತ ಜಾಗದ ಒತ್ತುವರಿಯ ಬಗ್ಗೆ ಕಾಂಗ್ರೆಸ್​ ಸರ್ಕಾರ ಮುಕ್ತ ಅವಕಾಶದ ರೀತಿ ಬಿಟ್ಟಿದ್ದ ಕಾರಣ ಇಂದು ಬೆಂಗಳೂರಿನಲ್ಲಿ ಮಳೆ ಬಂದಾಗ ಸಮಸ್ಯೆ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

Congress unplanned administration
ಬಸವರಾಜ ಬೊಮ್ಮಾಯಿ

By

Published : Sep 6, 2022, 1:55 PM IST

ಬೆಂಗಳೂರು:ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ, ಅವೈಜ್ಞಾನಿಕ ಹಾಗೂ ದುರಾಡಳಿತದ ಫಲವಾಗಿಯೇ ಇಂದು ಬೆಂಗಳೂರಿನಲ್ಲಿ ಕೆಲ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈ ಬಾರಿ ಕಳೆದ 90 ವರ್ಷದ ದಾಖಲೆ ಮುರಿಯುವ ರೀತಿ ಮಳೆಯಾಗಿದೆ. ನಗರದ ಮೂರು ವಲಯಗಳಲ್ಲಿ ಮಾತ್ರ ಸಮಸ್ಯೆಯಾಗಿದೆ. ಮಹಾದೇವಪುರ ವಲಯದಲ್ಲಿ ಹೆಚ್ಚು ಕೆರೆಗಳಿರುವುದು ಮತ್ತು ಅವುಗಳ ಒತ್ತವರಿಯಾಗಿರುವುದರಿಂದ ಸಮಸ್ಯೆಯಾಗಿದೆ ಎಂದಿದ್ದಾರೆ.

ಒತ್ತುವರಿ ತೆರವು ಮಾಡುತ್ತಿದ್ದೇವೆ, ಕಂಟ್ರೋಲ್ ರೂಂ ನಲ್ಲಿ 24 ಗಂಟೆಯೂ ಇರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾನಿ ಪರಿಹಾರ ಕಾರ್ಯಕ್ಕೆ ಮಳೆ ಸಹಕಾರ ನೀಡುತ್ತಿಲ್ಲ. ಎಡೆಬಿಡದೇ ಮಳೆ ಬರುತ್ತಿರುವುದರಿಂದ ಕಾರ್ಯಾಚರಣೆ ತಡವಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಬಡಾವಣೆಗಳ ಮುಳುಗಡೆಗೆ ಕಾಂಗ್ರೆಸ್ ಯೋಜನಾ ರಹಿತ ಆಡಳಿತ ಕಾರಣ

ಕಾಂಗ್ರೆಸ್​ನ ಅವೈಜ್ಞಾನಿಕ ಮತ್ತು ಯೋಜನಾ ರಹಿತ ಆಡಳಿತವೇ ಈ ಅನಾಹುತಕ್ಕೆ ಕಾರಣ. ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಒತ್ತುವರಿಗೆ ಅನುಮತಿಗಳನ್ನು ನೀಡಿರುವುದು ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ನಾವು ಇದನ್ನು ಸವಾಲಾಗಿ ಸ್ವೀಕರಿಸಿದ್ದು 1,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ನಿನ್ನೆ ಪುನಃ 300 ಕೋಟಿ ರೂ.ಗಳನ್ನು ಒತ್ತುವರಿ ತೆರೆವುಗೊಳಿಸಲು ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.

ವ್ಯಾಪಕ ಮಳೆಯಿಂದಾಗಿ ಪಂಪ್ ಹೌಸ್ ಕೆಟ್ಟಿದ್ದು, ಕುಡಿಯುವ ನೀರಿನ ಸಮಸ್ಯೆ ಆಗಿದೆ. ಸ್ಥಳ ಪರಿಶೀಲನೆ ನಡೆಸಿದ್ದೇವೆ, ಎರಡು ಪಂಪ್ ಹೌಸಗಳು ಸ್ಥಗಿತವಾಗಿವೆ. ಇಂದು ಒಂದು ಪಂಪ್ ಹೌಸ್ ದುರಸ್ತಿ ಆಗುತ್ತಿದೆ. 330 ಎಂಎಲ್‌ಡಿ ನೀರು ನಾಳೆಯೊಳಗೆ ಪೂರೈಕೆ ಆಗಲಿದೆ. ಮತ್ತೊಂದು 550 ಎಂಎಲ್ ಡಿ ಪೂರೈಸುವ ಪಂಪ್ ಹೌಸ್ ಇಂದು ಮಧ್ಯಾಹ್ನವೇ ಸರಿಯಾಗಲಿದ್ದು, ನೀರು ಪೂರೈಕೆಯಾಗಲಿದೆ. ಬೋರ್​ವೆಲ್ ಮೂಲಕ ನೀರು ಪೂರೈಸಲು ಪಾಲಿಕೆ, ಜಲಮಂಡಳಿಗೆ ಸೂಚಿಸಿದ್ದು, ಬೋರ್ ನೀರು ಪೂರೈಕೆ ಆಗದ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

ಇಂದು ಮಳೆಹಾನಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರದಿಂದ ತಂಡ ಬರಲಿದೆ. ನಾಳೆ ಸಮಸ್ಯೆಗಳ ಕುರಿತು ತಂಡದೊಂದಿಗೆ ಸಭೆ ನಡೆಸಲಾಗುವುದು. ಬೆಳಹಾನಿ, ಮನೆ ಹಾನಿ, ಮೂಲಸೌಕರ್ಯ ಹಾನಿ ಕುರಿತ ವರದಿಯೊಂದಿಗೆ ಮಾಹಿತಿ ಒದಗಿಸಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ ವ್ಯಾಪಕ ಮಳೆಹಾನಿ: ಕೇಂದ್ರ ತಂಡದಿಂದ ಮೂರು ದಿನ ಅಧ್ಯಯನ ಪ್ರವಾಸ

ABOUT THE AUTHOR

...view details