ಬೆಂಗಳೂರು:ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚನ್ನಪಟ್ಡಣದ ಸಮಾಜ ಸೇವಕರೊಬ್ಬರ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ದೂರವಾಣಿ ಸಂಭಾಷಣೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಸಚಿವರು ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಚಿವ ಮಾಧುಸ್ವಾಮಿಯವರದ್ದು ಎನ್ನಲಾದ ಈ ದೂರವಾಣಿ ಸಂಭಾಷಣೆಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ನಿಷ್ಕ್ರೀಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ. ಬೊಮ್ಮಾಯಿ ಅವರ ನಿಷ್ಕ್ರಿಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಂದು ಪ್ರಶ್ನಿಸಿದೆ.
ಅಲ್ಲದೇ, 'ತಳ್ಳಿದರೆ ಸಾಕು, ಇನ್ನೆಂಟು ತಿಂಗಳು ಅಂತ ತಳ್ತಾ ಇದೀವಿ ಅಷ್ಟೇ' ಇದು ಸಚಿವ ಮಾಧುಸ್ವಾಮಿಯವರ ಅಸಹಾಯಕತೆಯೋ, ತಮ್ಮದೇ ಸರ್ಕಾರದ ವಿರುದ್ದದ ಆರೋಪವೋ?. ಬೊಮ್ಮಾಯಿ ಅವರ ಅಡಳಿತದ ವಿರುದ್ಧ ಅಸಮಾಧಾನವೊ?. ಕೆಟ್ಟು ನಿಂತಿರುವ 'ಡಬಲ್ ಇಂಜಿನ್' ಸರ್ಕಾರವು ತಳ್ಳಿಕೊಂಡು ಹೋಗುವ ದೈನೇಸಿ ಸ್ಥಿತಿಗೆ ಬಂದಿರುವುದು ದುರಂತ! ಎಂದು ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ ಕಿಡಿಕಾರಿದೆ.
ರೈತರಿಗೆ ಅಷ್ಟೇ ಅಲ್ಲ, ಸ್ವತಃ ಕಾನೂನು ಸಚಿವರಿಗೆ ಸಹಕಾರಿ ಬ್ಯಾಂಕುಗಳಲ್ಲಿ ವಂಚನೆಯಾಗುತ್ತಿರುವುದು ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿ ಸಹೋದ್ಯೋಗಿ ಸಚಿವರಿಂದಲೇ ಮಾಹಿತಿ ಸಿಕ್ಕರೂ ಲೋಪ ಸರಿಪಡಿಸದ ಸಹಕಾರಿ ಸಚಿವರಿಂದ ರೈತರಿಗೆ ಇನ್ಯಾವ ನ್ಯಾಯ ಸಿಗಬಲ್ಲದು? ಟೇಕಾಫ್ ಆಗದ ಬಿಜೆಪಿಯ ಡಬಲ್ ಇಂಜಿನ್‌ಅನ್ನು ಈಗ ತಳ್ಳಲಾಗುತ್ತಿದೆ ಎಂದು ಟ್ವೀಟ್ನಲ್ಲಿ ಟೀಕಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ನವರಿಗೆ ರಾಷ್ಟ್ರಪ್ರಜ್ಞೆ ಇಲ್ಲ.. ಆರಗ ಜ್ಞಾನೇಂದ್ರ