ಬೆಂಗಳೂರು :ಜನಾರ್ದನ ರೆಡ್ಡಿಯವರ ಹೊಸ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಸಚಿವ ಶ್ರೀರಾಮುಲು ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ. ಶ್ರೀರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ ಎಂದು ಕೈ ಪಕ್ಷ ಪ್ರಶ್ನಿಸಿದೆ. ಟ್ವೀಟ್ ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ?. ರಾಮುಲು ಪಕ್ಷ ಬಿಡುವರೇ ಎಂದೆಲ್ಲ ಕೇಳಿ ರಾಜ್ಯ ಕಾಂಗ್ರೆಸ್ ಕಾಲೆಳೆದಿದೆ. ಈ ಮೂಲಕ ಶ್ರೀರಾಮುಲು ಟ್ವೀಟ್ನ ಮರ್ಮ ಏನು?. ಅದನ್ನು ಡಿಲೀಟ್ ಮಾಡಲು ಕಾರಣವೇನು ಎಂಬ ಪ್ರಶ್ನೆಗಳನ್ನು ಟ್ವೀಟ್ ಮೂಲಕ ಕೇಳಿ ಟಾಂಗ್ ಕೊಟ್ಟಿದೆ.
ಮಂಗಳವಾರ ಸಚಿವ ಶ್ರೀರಾಮುಲು ಅವರು ಜನವರಿ 17ನೇ 2023ರಂದು ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾಜನತೆಯನ್ನು ಹೃದಯಪೂರ್ವಕವಾಗಿ ಆಹ್ವಾನಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಆದರೆ ಯಾವಾಗ ಈ ಟ್ವೀಟ್ ಬಗ್ಗೆ ಸಾಕಷ್ಟು ಅನುಮಾನ, ಟೀಕೆ, ವ್ಯಾಖ್ಯಾನಗಳು ಬರಲು ಪ್ರಾರಂಭವಾಯಿತೋ ಶ್ರೀರಾಮುಲು ತಾವು ಮಾಡಿದ್ದ ಟ್ವೀಟ್ ಅನ್ನು ತೆಗೆದು ಹಾಕಿದ್ದರು. ಈ ಎಲ್ಲಾ ಬೆಳವಣಿಗಳು ಶ್ರೀರಾಮುಲು ಮೇಲೆ ಸಾಕಷ್ಟು ಅನುಮಾನ ಉಂಟುಮಾಡಿತ್ತು. ಶ್ರೀರಾಮುಲು ಜನಾರ್ದನ ರೆಡ್ಡಿ ಪಕ್ಷದತ್ತ ಒಲವು ಹೊಂದಿದ್ದಾರೆಯೇ ಎಂದು ಹಲವರು ಕೇಳಿದ್ದರು.
ಐಟಿ ದಾಳಿಗೂ ಟ್ವೀಟ್‌ಗೂ ಲಿಂಕ್:ಇತ್ತ ಕಾಂಗ್ರೆಸ್ ಟ್ವೀಟ್ನಲ್ಲಿ ಬಳ್ಳಾರಿಯ ಉಕ್ಕಿನ ಕಾರ್ಖಾನೆಗಳ ಮೇಲಿನ ಐಟಿ ದಾಳಿಗೂ ಶ್ರೀರಾಮುಲು ಟ್ವೀಟ್‌ಗೂ ಲಿಂಕ್ ಮಾಡಿದೆ. ಶ್ರೀರಾಮುಲು ಅವರೇ ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ ಎಂದು ಪ್ರಶ್ನಿಸಿದೆ. ಕಳೆದ ವಾರ ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ಗಣಿ ಉದ್ಯಮಿಗಳ ಮನೆ ಹಾಗೂ ಅವರ ಉಕ್ಕಿನ ಕಾರ್ಖಾನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಬೆಂಗಳೂರು, ಬಳ್ಳಾರಿ ಹಾಗೂ ಕೊಪ್ಪಳ ಸೇರಿದಂತೆ ಹಲವು ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿತ್ತು.