ಬೆಂಗಳೂರು: ಅನೈತಿಕ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರಕ್ಕೆ ಬಳಕೆಯಾದ ಕೋಟ್ಯಂತರ ರೂಪಾಯಿ ಹಣ ಯಾವುದು? ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
'ಉತ್ತರ ಕೊಡಿ ಮೋದಿ' ಅಭಿಯಾನದ ಮುಂದುವರಿದ ಭಾಗವಾಗಿ ಟ್ವೀಟ್ ಮಾಡಿರುವ ಪಕ್ಷ, ನ್ಯಾಯಾಂಗ ಸೇರಿದಂತೆ ಸ್ವಾಯುತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 'ರಾಜಕಾರಣದ' ಮೌಲ್ಯಗಳನ್ನು ನಾಶಗೊಳಿಸುತ್ತಿಲ್ಲವೇ? ಇದು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳಿಗೆ ಎಸಗುವ ಅಪಚಾರವಲ್ಲವೇ? ಎಂದು ಹೇಳಿದೆ.
ನರೇಂದ್ರ ಮೋದಿಯವರೇ ಹಿಂದೆ ಸಿದ್ದರಾಮಯ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದ 'ಕನ್ನಡ ಧ್ವಜ'ಕ್ಕೆ ಮಾನ್ಯತೆ ನೀಡಲಿಲ್ಲ ಏಕೆ? ಬ್ಯಾಂಕ್ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಸಿದುಕೊಂಡಿದ್ದು ಏಕೆ?ಹಿಂದಿ ಹೇರಿಕೆ ಏಕೆ? ಬಿಜೆಪಿ ನಾಯಕರು ಹಿಂದಿ 'ರಾಷ್ಟ್ರ ಭಾಷೆ' ಎಂದು ಸುಳ್ಳು ಹೇಳುತ್ತಿರುವುದೇಕೆ? ಎಂದಿದೆ.
ಚುನಾವಣೆಗೂ ಮೊದಲು ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ನಿಮ್ಮ ಜಲ ಸಂಪನ್ಮೂಲ ಸಚಿವರು ವಿವಾದ ಬಗೆಹರಿಸಿಯೇ ಬಿಟ್ಟೆವೆಂಬಂತೆ ಪ್ರಹಸನ ಸೃಷ್ಟಿಸಿದ್ದರು. ಈಗ ಮಹದಾಯಿ ಯೋಜನೆಯನ್ನು ತಡೆದು ದ್ರೊಹ ಮಾಡಿದ್ದೀರಿ, 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಯಾಕಿಂತಾ ಅನ್ಯಾಯ? ನರೇಂದ್ರ ಮೋದಿಯವರೇ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳ ಕಾವಲ್ ನಲ್ಲಿ ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, 2018ರ ಅಂತ್ಯಕ್ಕೆ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದಿರಿ, 3 ವರ್ಷ ಕಳೆದರೂ ಇನ್ನೂ ಒಂದೂ ಹೆಲಿಕಾಪ್ಟರ್ ತಯಾರಾಗಿಲ್ಲ ಏಕೆ? ಎಂದಿದ್ದಾರೆ.
ಮೋದಿಯವರೇ, ಅಚ್ಚೇ ದಿನ್ ಎಲ್ಲಿ? ವಿಕಾಸ್ ಎಲ್ಲಿ? ಕಪ್ಪು ಹಣ ಎಲ್ಲಿ? ಉದ್ಯೋಗ ಸೃಷ್ಟಿ ಎಲ್ಲಿ? ರೈತರ ಆದಾಯ ದ್ವಿಗುಣ ಎಲ್ಲಿ? ಮಹಿಳಾ ಸಬಲೀಕರಣ ಎಲ್ಲಿ? ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ? ಎಂದು ಪ್ರಶ್ನೆ ಹಾಕಿದೆ.
ಈ ಹಿಂದೆ ತುಮಕೂರಿಗೆ ಭೇಟಿ ನೀಡಿ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಿರಿ, ನದಿ ಜೋಡಣೆ ಪ್ರಕ್ರಿಯೆ ಆರಂಭವಾಗಿದೆಯೇ? ಈಗ ಯಾವ ಹಂತದಲ್ಲಿದೆ? ಆಗಿರುವ ಖರ್ಚು ವೆಚ್ಚಗಳೇನು? ಯೋಜನೆ ಪೂರ್ಣಗೊಳ್ಳುವುದು ಯಾವಾಗ? ಎಂದು ಕೇಳಿದೆ.