ಬೆಂಗಳೂರು: ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಶ್ರೀಗಳ ಭುಜದ ಮೇಲೆ ಕೈ ಇರಿಸಿರುವ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಂದಿನ ಸಮಾರಂಭದಲ್ಲಿ ಶ್ರೀಗಳಿಗೆ ಅಶೋಕ್ ಅವರು ಅಪಮಾನ ಮಾಡಿದ್ದಾರೆ ಎಂದು ಟ್ವೀಟ್ ಮೂಲಕ ಬೇಸರ ಹೊರ ಹಾಕಿರುವ ಕಾಂಗ್ರೆಸ್, ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವ ಘನತೆ ಇರುತ್ತೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್.ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ..? ಶ್ರೀಗಳ ಮೇಲೆ ಕೈ ಹಾಕಿದ ಹಾಗೇ ಪ್ರಧಾನಿ ಮೋದಿ ಹೆಗಲ ಮೇಲೆ ಕೈ ಹಾಕುವಷ್ಟು ಧೈರ್ಯವಿದೆಯೇ..? ಧರ್ಮ, ಸಂಸ್ಕೃತಿ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಹೇಳಿದೆ.
ಕೆಂಪೇಗೌಡರ ಪ್ರತಿಮೆ ಅನಾವರಣ ಬಳಿಕ ಫೋಟೋ ತೆಗೆದುಕೊಳ್ಳುವ ಸಮಯದಲ್ಲಿ ಶ್ರೀಗಳಿಗೆ ಅಶೋಕ್ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ದೂರಿದೆ. ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಪೋಸ್ಕೊಟ್ಟ ಕಂದಾಯ ಸಚಿವ ಆರ್.ಅಶೋಕ್ ನಡೆಗೆಗೆ ಖಂಡನೆ ವ್ಯಕ್ತಪಡಿಸಿದೆ.
ಮತ್ತೊಂದು ಟ್ವೀಟ್ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಲೇವಡಿ ಮಾಡಿರುವ ಕಾಂಗ್ರೆಸ್, ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲೂ ಹರಸಾಹಸಪಡಬೇಕೇ? ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು. ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಸಿಎಂ ಅವರ ಸ್ಥಿತಿ ಶೋಚನೀಯವಾಗಿದೆ! ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವುದು ದುರದೃಷ್ಟಕರ ಎಂದು ಬೇಸರ: ಸುರ್ಜೆವಾಲಾ