ಬೆಂಗಳೂರು :ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಭೋಜೇ ಗೌಡರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿ ವಿರುದ್ಧ ಮಾಡಿರುವ ಆರೋಪ ಮುಂದಿಟ್ಟು ಕಾಂಗ್ರೆಸ್ ಪಕ್ಷವೂ ಸಹ ಜೋಶಿ ಅವರ ಕಾಲೆಳೆಯುವ ಕಾರ್ಯ ಮಾಡಿದೆ. ಟ್ವೀಟ್ ಮಾಡಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್, ಹುದ್ದೆ ಮಾರಾಟ ಯೋಜನೆ ಈಗ ರಾಜ್ಯದಿಂದ ಕೇಂದ್ರಕ್ಕೂ ವಿಸ್ತರಿಸಿದೆಯೇ ಬಿಜೆಪಿ? ಪ್ರಹ್ಲಾದ್ ಜೋಶಿ ಅವರೇ, ಲಂಚದ ಆರೋಪ ಬಂದಾಕ್ಷಣ ತನಿಖೆಗೆ ಒಳಪಟ್ಟು ಸಾಚಾತನ ನಿರೂಪಿಸುವುದು ಬಿಟ್ಟು, ಹಾವು ತುಳಿದಂತೆ ಹೌಹಾರುವುದೇಕೆ? ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಬ್ಲಾಕ್ಮೇಲ್ ಮಾಡುವುದೇಕೆ? ಈ ಲಂಚ ಪ್ರಕರಣದ ಬಗ್ಗೆ ಉನ್ನತ ತನಿಖೆಯಾಗಲಿ ಎಂದು ಒತ್ತಾಯಿಸಿದೆ.
ಭೋಜೇ ಗೌಡರು ಹೇಳಿದ್ದೇನು?: ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿಗೆ ಸದಸ್ಯರ ನೇಮಕ ಸಂದರ್ಭ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿ 2.5 ಕೋಟಿ ರೂ. ಲಂಚ ಸ್ವೀಕರಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ಎಂಸಿ ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ ಹರೀಶ್ ಅಯ್ಯಣ್ಣ ಎಂಬುವವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕಾಗಿ ಪ್ರಲ್ಹಾದ್ ಜೋಶಿಯವರ ಕಚೇರಿಯ ಸಿಬ್ಬಂದಿಗೆ 2.5 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಕುಮಾರ್ ಎಂಬುವವರ ಬ್ಯಾಂಕ್ ಖಾತೆಗೆ 2021ರ ಜುಲೈನಲ್ಲಿ 2 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಉಳಿದ 50 ಲಕ್ಷ ರೂ. ನಗದು ರೂಪದಲ್ಲಿ ನೀಡಲಾಗಿದೆ. ಹರೀಶ್ ಅಯ್ಯಣ್ಣ ಅವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾಗಿ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ ಹರ್ಷವರ್ಧನ್ ಅವರು ಪ್ರಲ್ಹಾದ್ ಜೋಶಿಯವರಿಗೆ ಪತ್ರವನ್ನೂ ಬರೆದಿದ್ದರು ಎಂದು ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕೇಂದ್ರ ಸಚಿವರ ಪತ್ರಗಳನ್ನು ತೋರಿಸಿದ್ದರು.
ಇದನ್ನೂ ಓದಿ :ಮಾರ್ಚ್ 23 ರಿಂದ 30ರ ವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ