ಕರ್ನಾಟಕ

karnataka

ETV Bharat / state

ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ: ಕಾಂಗ್ರೆಸ್ ವ್ಯಂಗ್ಯ - ಈಟಿವಿ ಭಾರತ ಕನ್ನಡ ನ್ಯೂಸ್​​

ತನ್ನ ದುಷ್ಟ ಆಡಳಿತದಿಂದಾಗಿ ಮತದಾರರನ್ನು ಓಲೈಸಿ ಮತ ಪಡೆಯಲು ಅಸಾಧ್ಯ ಎಂದು ಅರಿತ ಬಿಜೆಪಿ ರೌಡಿ ಮೋರ್ಚಾ ಕಟ್ಟಿಕೊಂಡು ಬೆದರಿಸಿ ಮತ ಪಡೆಯಲು ಸಿದ್ಧಗೊಳ್ಳುತ್ತಿದೆ. ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್​​ ವ್ಯಂಗ್ಯವಾಡಿದೆ.

congress-tweet-against-bjp
ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ: ಕಾಂಗ್ರೆಸ್ ಅಣಕ

By

Published : Dec 7, 2022, 6:36 AM IST

ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ದಾಮುಲ್ಲಾ ಖಾನ್ ಎಂಬ ಮಾಜಿ ಸಚಿವ ಸಿ ಟಿ ರವಿ ಹೇಳಿಕೆಗೆ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಸಿಎಂ ಬೊಮ್ಮಾಯಿ‌ ಸೇರಿದಂತೆ ಬಿಜೆಪಿ ನಾಯಕರ ಹಳೆ ಫೋಟೋ ಪೋಸ್ಟ್ ಮಾಡಿ ತಿರುಗೇಟು ಕೊಟ್ಟಿದೆ.

ಇವರನ್ನು "ಬೊಮ್ಮಾಯುಲ್ಲಾ ಖಾನ್" ಎಂದು ಕರೆಯಬಹುದೇ ಬಿಜೆಪಿ..? ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ ಬಿಜೆಪಿ...? ಇವರಿಗೆ "ಜಬ್ಬಾರ್ ಖಾನ್" "ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ ಸಿ ಟಿ ರವಿ ಅವರೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.

ರೌಡಿ ರಾಜ್ಯ ಮಾಡಲು ಮುಂದಾಗಿರುವ ಬಿಜೆಪಿ: ಸದ್ದಿಲ್ಲದೆ ರೌಡಿ ಶೀಟರ್ ಮಾರ್ಕೆಟ್ ವೇಡಿ ಬಿಜೆಪಿ ಸೇರಿ ರೌಡಿ ರಾಜಕಾರಣ ಶುರು ಮಾಡಿಯಾಗಿದೆ. ತಮ್ಮ ದುಷ್ಟ ಆಡಳಿತದಿಂದಾಗಿ ಮತದಾರರನ್ನು ಓಲೈಸಿ ಮತ ಪಡೆಯಲು ಅಸಾಧ್ಯ ಎಂದು ಅರಿತ ಬಿಜೆಪಿ ರೌಡಿ ಮೋರ್ಚಾ ಕಟ್ಟಿಕೊಂಡು ಬೆದರಿಸಿ ಮತ ಪಡೆಯಲು ಸಿದ್ಧಗೊಳ್ಳುತ್ತಿದೆ. ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದೆ.

ಗುಜರಾತ್ ಚುನಾವಣೆ ವಿಚಾರ ಪ್ರಸ್ತಾಪ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಗುಜರಾತಿನಲ್ಲಿ ಸಂಪೂರ್ಣ ಮದ್ಯ ನಿಷೇಧವಿದೆ (ಕಾಗದದ ಮೇಲೆ ಮಾತ್ರ!) ಆದರೆ ಚುನಾವಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ತನ್ನದೇ ಕಾರಿನಲ್ಲಿ ಮದ್ಯ ತುಂಬಿಕೊಂಡು ರಾಜಾರೋಷವಾಗಿ ಮತದಾರರಿಗೆ ಹಂಚಲು ತೆರಳಿದ್ದಾನೆ. ಮದ್ಯ ನಿಷೇಧವಿದ್ದರೂ ಆತನಿಗೆ ಮದ್ಯ ಸಿಕ್ಕಿದ್ದು ಹೇಗೆ? ಚುನಾವಣೆಗಾಗಿ ವಿಶೇಷ ಮದ್ಯ ವ್ಯವಸ್ಥೆ ಮಾಡಿದ್ದಾರೆಯೇ ಮೋದಿಜಿ? ಎಂದು ಪ್ರಶ್ನಿಸಿದೆ.

ಬೊಮ್ಮಾಯಿಯವರೇ ಒಮ್ಮೆ ಮುಖ ನೋಡಿಕೊಳ್ಳಿ : ಈಗಾಗಲೇ ಬಿಜೆಪಿಯ ಅನೇಕರು ಜಾನಾಕ್ರೋಶದ ದರ್ಶನ ಪಡೆದಿದ್ದಾರೆ. ಈಗ ಶಾಸಕ ರಾಮಣ್ಣ ಲಮಾಣಿ ಸರದಿ. ಭ್ರಷ್ಟ ಹಾಗೂ ನಿಷ್ಕ್ರಿಯ ಬಿಜೆಪಿ ಸರ್ಕಾರದಿಂದಾಗಿ ಬಿಜೆಪಿಗರಿಗೆ ಜನ ಓಡಾಡಲು ಬಿಡದಂತ ಸ್ಥಿತಿ ಸದ್ಯದಲ್ಲೇ ಬರಲಿದೆ. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ದುರಾಡಳಿತಕ್ಕೆ ಜನರ ಈ ಆಕ್ರೋಶವೇ ಕನ್ನಡಿಯಾಗಿದೆ, ಒಮ್ಮೆ ಮುಖ ನೋಡಿಕೊಳ್ಳಿ ಎಂದಿದೆ.

ಬಿಜೆಪಿಯ ಜನಸ್ಪಂದನ ಯಾತ್ರೆಯ ರಹಸ್ಯವನ್ನು ಯತ್ನಾಳರು ಹೇಳಿದ್ದಾರೆ ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ. ರಾಜ್ಯ ಬಿಜೆಪಿ ₹500 ಸಂಬಳ ಕೊಟ್ಟು ಜನ ಸೇರಿಸುವ ಸಂಗತಿ ಬಟಾಬಯಲು! ಈಗ ಹಣ ಕೊಟ್ಟರೂ ಜನ ಬರಲು ಒಪ್ಪದ ಕಾರಣಕ್ಕೆ ಬಿಜೆಪಿ ಕಾರ್ಯಕ್ರಮಗಳಲ್ಲಿ ಖಾಲಿ ಕುರ್ಚಿಗಳು ರಾರಾಜಿಸುತ್ತವೆ! ಆ ಮಟ್ಟಿಗೆ ಜನಾಕ್ರೋಶವನ್ನು ಬಿಜೆಪಿ ಎದುರಿಸುತ್ತಿದೆ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.

ಸರ್ಕಾರಿ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರನ ಫೋಟೋ! ಇದು ಕುಟುಂಬ ರಾಜಕೀಯ ಹಾಗೂ ಶಿಷ್ಟಾಚಾರ ಉಲ್ಲಂಘನೆಯ ಪರಿದಿಯೊಳಗೆ ಬರುವುದಿಲ್ಲವೇ ಬಿಜೆಪಿ? ಸ್ವತಃ ಬಿಜೆಪಿ ಶಾಸಕರೇ ಪ್ರಶ್ನಿಸುತ್ತಿದ್ದಾರೆ, ಉತ್ತರಿಸುವಿರಾ? ಶಾಸಕರಿಗಿಂತ ಮೇಲೆ ಫೋಟೋ ಹಾಕಲು ಈಶ್ವರಪ್ಪನವರ ಪುತ್ರ ಎಂಬುದೇ ಅರ್ಹತೆಯೇ? ಎಂದು ಕೇಳಿದೆ.

ಸರ್ಕಾರವೇ ಗೋವುಗಳ ಹತ್ಯೆ ಮಾಡುತ್ತಿದೆ: ಸರ್ಕಾರ ಗೋಹತ್ಯೆ ನಿಷೇಧ ತಂದಿದ್ದರ ಹಿಂದಿನ ಉದ್ದೇಶ, ಗೋಹತ್ಯೆಯನ್ನು ನಾವೇ ಮಾಡುತ್ತೇವೆ, ನೀವು ಮಾಡಬೇಡಿ ಎಂಬುದೇ ಬಿಜೆಪಿ? ಅನುಪಯುಕ್ತ ಗೋವುಗಳು ಹಾದಿಬೀದಿಯಲ್ಲಿ ನರಳಿ ಸಾಯುತ್ತಿದ್ದರೂ ಸರ್ಕಾರ ಗೋಶಾಲೆಗಳನ್ನು ಆರಂಭಿಸಿಲ್ಲ. ಬಿಜೆಪಿ ಸರ್ಕಾರವೇ ಗೋವುಗಳ ಹತ್ಯೆ ಮಾಡುತ್ತಿದೆ. ಇದಕ್ಕೆ ಯಾರನ್ನು ಶಿಕ್ಷಿಸಬೇಕು ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ ರೌಡಿ ಮೋರ್ಚಾ: ಬಿಜೆಪಿ ರೌಡಿ ಮೋರ್ಚಾದ ಪಟ್ಟಿ ಬೆಳೆಯುತ್ತಲೇ ಇದೆ, ಒಂಟೆ ರೋಹಿತ್, ಮಾರ್ಕೆಟ್ ವೇಡಿ ಎಂಬ ರೌಡಿ ಶೀಟರ್‌ಗಳೊಂದಿಗೆ ಸಚಿವ ಡಾ ಅಶ್ವತ್ಥನಾರಾಯಣ್ ಅವರ ಗೆಳೆತನ ಜಗಜ್ಜಾಹೀರಾಗಿದೆ. ಮಾರ್ಕೆಟ್ ವೇಡಿ ಈಗಾಗಲೇ ಬಿಜೆಪಿ ಸೇರಿಯೂ ಆಗಿದೆ. ಹೀಗಿದ್ದೂ ರೌಡಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವ ಬಿಜೆಪಿಗರ ನಾಲಿಗೆಯನ್ನು ಯಾವುದರಿಂದ ತಯಾರಿಸಲಾಗಿದೆ!! ದೊಣ್ಣೆ ಹಿಡಿದು ಜನರನ್ನು ಬೆದರಿಸುತ್ತಿದ್ದ ಆರ್ ಎಸ್ ಎಸ್ ಈಗ ಲಾಂಗು ಮಚ್ಚು ಹಿಡಿದು ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆಯೇ? ರೌಡಿ ಮೋರ್ಚಾ ತೆರೆಯುವಂತೆ ಬಿಜೆಪಿಗೆ ಆರ್ ಎಸ್ ಎಸ್ ಆದೇಶಿಸಿದೆಯೇ? ಈ ಕಾರಣಕ್ಕಾಗಿಯೇ ಬಿಜೆಪಿಯ ವೈಟ್ ಕಾಲರ್ ರೌಡಿಗಳು ಲಜ್ಜೆ ಬಿಟ್ಟು ಅಸಲಿ ರೌಡಿಗಳನ್ನು ಸಮರ್ಥನೆ ಮಾಡುತ್ತಿದ್ದಾರೆಯೇ? ಬಿಜೆಪಿಗರಿಗೂ ರೌಡಿಗಳಿಗೂ ಏನು ಈ ಅನುಬಂಧ? ಎಂದು ಕಾಂಗ್ರೆಸ್​ ಕೇಳಿದೆ.

ಇದನ್ನೂ ಓದಿ :'ರೌಡಿ ಮೋರ್ಚಾ' ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ಕಿಡಿ: ಕೈ ನಾಯಕರಿಗೆ ಹಲವು ಪ್ರಶ್ನೆ!

ABOUT THE AUTHOR

...view details