ಬೆಂಗಳೂರು : ರಾಜ್ಯ ಬಿಜೆಪಿ ರೌಡಿಗಳಿಗೆ ಪ್ರಾಧಾನ್ಯತೆ ನೀಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಇಂದು ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಸೋರಿಕೆ ಪಟ್ಟಿ ಬಿಡುಗಡೆ ಮಾಡಿ ಲೇವಡಿ ಮಾಡಿದೆ. ಕಾಂಗ್ರೆಸ್ ಪಕ್ಷದಿಂದ ಮತ್ತೊಂದು ಅಭಿಯಾನ ಈ ಮೂಲಕ ಆರಂಭವಾಗಿದ್ದು ಸೋರಿಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ಬಿಜೆಪಿ ಅಭ್ಯರ್ಥಿಯಾಗಲು ಇರಬೇಕಾದ ಮಾನದಂಡಗಳು ಎಂದು ವಿವರ ಒಳಗೊಂಡ ಅಭ್ಯರ್ಥಿಗಳ ಫೋಟೊವನ್ನು ಸೈಟ್ ನಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್ ವಿಶಿಷ್ಟವಾಗಿ ಬಿಜೆಪಿ ಸರ್ಕಾರ ಅಪರಾಧಿಗಳಿಗೆ ಬೆಂಬಲವಾಗಿ ನಿಂತಿದೆ ಎಂದು ಲೇವಡಿ ಮಾಡಿದೆ.
https://www.leakedbjp.com/ ಎಂಬ ವೆಬ್ ಸೈಟ್ ಸೃಷ್ಟಿಸಿ ಬಿಡುಗಡೆ ಮಾಡಿದ್ದು, ಬಿಜೆಪಿ ಕಪಾಟಿನಿಂದ ಅಸ್ಥಿ ಪಂಜರಗಳು ಉರುಳುತ್ತಿವೆ. ರೌಡಿ ಶೀಟರ್ ಗಳು, ಸ್ಲಂ ಲಾರ್ಡ್ ಗಳನ್ನು ಕಾರ್ಯಕರ್ತರನ್ನಾಗಿಸಿಕೊಂಡು ರಾಜಕೀಯವನ್ನು ಅಪರಾಧಿಕರಿಸುತ್ತಿದೆ ಎಂದು ದೂರಿದೆ. ಸಂಸದ ತೇಜಸ್ವಿ ಸೂರ್ಯ ಗ್ಯಾಂಗ್ ಸ್ಟಾರ್ ಸೈಲೆಂಟ್ ಸುನೀಲ್ ಜೊತೆಗೆ ಕಾಣಿಸಿಕೊಂಡಿದ್ದರು. ರೌಡಿ ಶೀಟರ್ ಗಳು ಬಿಜೆಪಿ ಸೇರುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದಿರುವ ಕಾಂಗ್ರೆಸ್ ಈ ಮೂಲಕ ವಿಶಿಷ್ಟವಾಗಿ ಬಿಜೆಪಿ ಸರ್ಕಾರದ ವಿರುದ್ಧ ತನ್ನ ಹೋರಾಟವನ್ನು ಆರಂಭಿಸಿದೆ.
ವಿದ್ಯಾರ್ಥಿ ವೇತನ ನಿಲ್ಲಿಸಿದ ಸರ್ಕಾರ : ಭಾರತದಲ್ಲಿ ಶೈಕ್ಷಣಿಕ ಅಸಮಾನತೆ ಹೆಚ್ಚುತ್ತಿದೆ. ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಶಾಲೆ ತೊರೆಯುವ ಸಂಖ್ಯೆ ಹೆಚ್ಚಿದೆ. ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇದರ ನಡುವೆ ಶಿಕ್ಷಣಕ್ಕೆ ಉತ್ತೇಜಿಸಬೇಕಾದ ಸರ್ಕಾರ ವಿದ್ಯಾರ್ಥಿವೇತನ ನಿಲ್ಲಿಸಿದೆ. ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ಗುಲಾಮಗಿರಿಗೆ ತಳ್ಳುವ ಸ್ಪಷ್ಟ ಅಜೆಂಡಾ ಬಿಜೆಪಿಯದ್ದು ಎಂದು ಟ್ವೀಟ್ ಮೂಲಕ ಅವಹೇಳನ ಮಾಡಿದೆ.
ಕರ್ನಾಟಕದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕಿಂತ ಬಸವರಾಜ್ ಬೊಮ್ಮಾಯಿ ಸರ್ಕಾರವೇ ಹೆಚ್ಚು ಹಗೆ ಸಾಧಿಸುತ್ತಿರುವಂತಿದೆ. ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಕರ್ನಾಟಕದ ಪೊಲೀಸರೇ ಥಳಿಸಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಪೊಲೀಸರೇ ತೆಗೆದಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯವೆಸಗಲು ಪೊಲೀಸರಿಗೆ ಸರ್ಕಾರವೇ ನಿರ್ದೇಶಿಸಿದೆಯೇ? ಎಂದು ಪ್ರಶ್ನಿಸಿದೆ.
ಬಿಜೆಪಿಯಿಂದ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನ: ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರದಲ್ಲಿ ಏಕೆ ಎಲ್ಲಾ ಸಚಿವರ ಬಾಯಿ ಬಂದ್ ಆಗಿದೆ? ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಎರಡೂ ಸರ್ಕಾರಗಳು ಸೇರಿಕೊಂಡು ಕನ್ನಡಿಗರನ್ನು ವಂಚಿಸುತ್ತಿವೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಅಲ್ಲೂ ನಮ್ಮದೇ ಸರ್ಕಾರ ಎಂಬ ಮಮಕಾರವೇ ರಾಜ್ಯ ಬಿಜೆಪಿಗೆ? ರೌಡಿಗಳನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಮತ್ತೊಂದೆಡೆ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ನಡೆಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.