ಬೆಂಗಳೂರು:ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ರೌಡಿಗಳು ಪರೇಡ್ ನಡೆಸಲು ಸಜ್ಜಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.
ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಏನು ವ್ಯವಹಾರ? ಯಾವ ನಂಟು?. ಸೈಲೆಂಟ್ ಸುನೀಲ, ಫೈಟರ್ ರವಿ, ಬೆತ್ತನಗೆರೆ ಶಂಕರ ಬಿಜೆಪಿ ಜೊತೆಗೆ ಗುರುತಿಸಿಕೊಂಡ ನಂತರ ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿ ಶೀಟರ್ ನಿನ್ನೆ ರಾತ್ರಿ ಸಚಿವ ವಿ.ಸೋಮಣ್ಣ ಮನೆಗೆ ಬಂದಿದ್ದೇಕೆ? ಎಂದು ಪ್ರಶ್ನಿಸಿದೆ.
ಆತನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ ಬಿಜೆಪಿ?. ಮೊದಲೆಲ್ಲ ರೌಡಿ ಶೀಟರ್‌ಗಳು ಪೊಲೀಸರೆದುರು ಪರೇಡ್ ನಡೆಸುತ್ತಿದ್ದರು. ಈಗ ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ಪರೇಡ್ ನಡೆಸಲು ಸಜ್ಜಾಗಿದ್ದಾರೆ! ರೌಡಿಗಳೊಂದಿಗೆ ಬಿಜೆಪಿಗರ ಬಾಂಧವ್ಯ ಹೊರಬರುತ್ತಿರುವಾಗ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೊಮ್ಮಣ್ಣನವರ ಮನೆಗೆ ಭೇಟಿ ನೀಡಿದ್ದು, ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ನೀಡುವುದಕ್ಕಾ? ಎಂದು ಟೀಕಿಸಿದೆ.
ಪೋಸ್ಟರ್ ಅಭಿಯಾನ ಮೂಲಕ ಮತ್ತಷ್ಟು ಟೀಕೆ: 'ಕಾಂಗ್ರೆಸ್ನ 40% ಸರ್ಕಾರ ಪೇಜ್ನಲ್ಲಿ ಮತ್ತಷ್ಟು ಪೋಸ್ಟ್ಗಳನ್ನು ಹಾಕುವ ಮೂಲಕ ರೌಡಿಶೀಟರ್ಗಳ ಪಕ್ಷ ಸೇರ್ಪಡೆಗೆ ಲೇವಡಿ ಮಾಡಿದೆ. ಬಿಜೆಪಿಯಲ್ಲಿ ಪಕ್ಷ ಸೇರ್ಪಡೆಗೆ ಏನೇನು ಅರ್ಹತೆಗಳಿರಬೇಕು ಅಂತ ಲಿಸ್ಟ್ ಮಾಡಿ ಬಿಜೆಪಿಯನ್ನು ಟೀಕಿಸಿದೆ. ಬಿಜೆಪಿ ಸೇರ್ಪಡೆಯಾಗಲು ರೌಡಿಶೀಟರ್ ಆಗಿರಬೇಕು. ಕನಿಷ್ಠ 20 ಕೇಸುಗಳು ಇರಬೇಕು, ಕೊಲೆ ಕೇಸ್ ಇದ್ದರೆ ಉತ್ತಮ. ಅತ್ಯಾಚಾರಿಯಾಗಿರಬೇಕು, ಪೊಲೀಸ್ ವಾಂಟೆಡ್ ಲಿಸ್ಟ್ನಲ್ಲಿರಬೇಕು, ಹಫ್ತಾ ವಸೂಲಿಯಲ್ಲಿ ಪಳಗಿರಬೇಕು. ಇಷ್ಟೆಲ್ಲ ಅರ್ಹೆತಗಳಿದ್ದರೆ ಬಿಜೆಪಿಯಲ್ಲಿ ಸೇರ್ಪಡೆಗೊಳ್ಳಬಹುದು. ಸೇರ್ಪಡೆಯಾದರೆ 40% ಕಮಿಷನ್ ಗ್ಯಾರಂಟಿ' ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್, ರೌಡಿಶೀಟರ್ಗಳ ರೀತಿಯಲ್ಲೇ ಸಚಿವರಿಗೂ ಹೆಸರಿಟ್ಟು ಕಾಲೆಳೆದಿದೆ. ರಮೇಶ್ ಜಾರಕಿಹೊಳಿ, ಸಚಿವ ಕೆ ಸುಧಾಕರ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಬಗ್ಗೆಯೂ ಅಪಹಾಸ್ಯ ಮಾಡಲಾಗಿದೆ. ಸಚಿವರಾದ ಅಶೋಕ್, ಅಶ್ವತ್ಥ್ ನಾರಾಯಣ ಎಂದು ವ್ಯಂಗ್ಯವಾಡಿದೆ.
ಸಿಎಂ ಬೊಮ್ಮಾಯಿಗೆ ಬಾಂಬೆ ಬೊಮ್ಮಣ್ಣ ಎಂದು ಅಪಹಾಸ್ಯ ಮಾಡಿ ಪೋಸ್ಟರ್ ಮಾಡಲಾಗಿದ್ದು, ಮುಂದೊಂದು ದಿನ ಬಿಜೆಪಿ ನಾಯಕರ ಹೆಸರುಗಳು ಹೀಗಿರಬಹುದು ಎಂದು ಲೇವಡಿ ಮಾಡಿದೆ. ಪಾತಕಿಗಳ ತವರುಮನೆ ಬಿಜೆಪಿಯಾಗುತ್ತಿದೆ ಎಂದು ಪೋಸ್ಟರ್ ಹಾಕಿ ಟೀಕಿಸಿದೆ.
ಇದನ್ನೂ ಓದಿ:ಯಾವುದೇ ರೌಡಿಗಳನ್ನು ನಾವು ಪಕ್ಷಕ್ಕೆ ಸೇರಿಸಿಕೊಂಡಿಲ್ಲ: ಬೊಮ್ಮಾಯಿ