ಬೆಂಗಳೂರು: ಪರೇಶ್ ಮೇಸ್ತಾ ಸಾವು ಆಕಸ್ಮಿಕ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದು ಹತ್ಯೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ತನ್ನ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಇದು ಹತ್ಯೆಯಲ್ಲ ಆಕಸ್ಮಿಕ ಸಾವು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಸಲ್ಲಿಕೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಹೊನ್ನಾವರದ ಪರೇಶ್ ಮೇಸ್ತಾ ಅವರದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ - ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತಾನಂತಹ ಅಮಾಯಕ ಯುವಕರ ರಕ್ತ ಇದೆ. ರಾಜ್ಯ ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ವರದಿ ನೀಡಿದೆ. ನಮ್ಮ ಸರ್ಕಾರವಿದ್ದಾಗ ಸಂಭವಿಸಿದ್ದ ಈ ಸಾವಿಗೆ ಬಿಜೆಪಿ ನಾಯಕರು ಹಿಂದುತ್ವದ ಬಣ್ಣ ಕಟ್ಟಿ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ ಐಜಿಪಿ ಕಾರಿಗೆ ಕಲ್ಲು ತೂರಿ ಲಾಟಿಚಾರ್ಜ್ ಕೂಡ ನಡೆದಿತ್ತು. ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ?