ಬೆಂಗಳೂರು: ಪ್ರೇಮಿಗಳ ದಿನದಂದು ಬಿಜೆಪಿ ಸರ್ಕಾರದ ಕಾಲೆಳೆದು ಕಾಂಗ್ರೆಸ್ ವಿಭಿನ್ನವಾಗಿ ಟ್ವೀಟ್ ಮಾಡಿದೆ. 40 ಪರ್ಸೆಂಟ್ ಲವ್ ಹ್ಯಾಷ್ ಟ್ಯಾಗ್ ಮಾಡಿದೆ. "ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜೂಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು". ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ.. ಎಂದು ಲೇವಡಿ ಮಾಡಿದೆ.
ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ. ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ. ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ. ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ. ಮಂಡ್ಯದಲ್ಲಿ ತಿರಸ್ಕಾರದ ಪ್ರೇಮ ವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನ ಪ್ರೇಮಿಗೆ ನಮ್ಮ ಸಾಂತ್ವಾನಗಳು ಎಂದಿದೆ.
"ಪ್ರೀತಿ ಮಧುರ, ತ್ಯಾಗ ಅಮರ": ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ. ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ. "ಸಚಿವ ಹುದ್ದೆ" ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ ಎಂದು ಕಾಂಗ್ರೆಸ್ ಕುಹಕವಾಡಿದೆ.
ಬಿಎಸ್ವೈ ದುರಂತ ನಾಯಕ: ಕರ್ನಾಟಕದ ಬಿಜೆಪಿಯ ಮೇರು ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಬಿಎಸ್ವೈ ಅವರ ರಾಜಕೀಯ ಜೀವನದ ಅರ್ಧ ಬದುಕು ಕಳೆಯದ ಅಮಿತ್ ಶಾ ಯಡಿಯೂರಪ್ಪನವರನ್ನು ನಿರ್ಲಕ್ಷಿಸಿದ್ದಾರೆ. 'ಸಂತೋಷ ಕೂಟ'ದ ಆಟದಲ್ಲಿ ಬಿಎಸ್ವೈ "ದುರಂತ ನಾಯಕ"ನಾಗಿದ್ದಾರೆ. ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಸಂಸ್ಕೃತಿ ಇದೇನಾ ರಾಜ್ಯ ಬಿಜೆಪಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಹತ್ತಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರತಿಭಟನೆಗಳು ಈ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದೆ. ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಪ್ರತಿಭಟನಾಕಾರರ ಸಮಸ್ಯೆ, ಬೇಡಿಕೆಗಳನ್ನು ಭೇಟಿಯಾಗಿ ಕೇಳಿಸಿಕೊಳ್ಳುವ ಕನಿಷ್ಠ ಸೌಜನ್ಯ ಇಲ್ಲದಿರುವುದು ಬಿಜೆಪಿಯ ಧೂರ್ತತನಕ್ಕೆ ಸಾಕ್ಷಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಒಮ್ಮೆ ಫ್ರಿಡಂ ಪಾರ್ಕ್ ಕಡೆ ಬನ್ನಿ ಎಂದಿದೆ.