ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳನ್ನು ಖರೀದಿಸುವ ವ್ಯವಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಸೇ-ಸಿಎಂ ಎಂಬ ಟ್ಯಾಗ್ ಲೈನ್ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ಲಕ್ಷ ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 40 ಪರ್ಸೆಂಟ್ ಕಮಿಷನ್‌ನಲ್ಲಿ ನೀಡಿದ ಹಣವೇ?, ಶೇ.40 ಕಮಿಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ?, ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ?, ಬಸವರಾಜ ಬೊಮ್ಮಾಯಿ ಅವರೇ, ಆ 'ಲಂಚ'ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕು ಎಂದು ಹೇಳಿದೆ.
ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು. ಆ ಹಣ ಯಾರದ್ದು?, ಸರ್ಕಾರದ್ದೇ?, ಬಿಜೆಪಿ ಪಕ್ಷದ್ದೇ? ಮುಖ್ಯಮಂತ್ರಿಗಳದ್ದೇ?, ಶೇ 40 ಕಮಿಷನ್ ಆ ಹಣದ ಮೂಲವೇ?, ಪಡೆದ ಲಂಚವು ಕೊಡುವ ಲಂಚವಾಗಿ ಮಾರ್ಪಟ್ಟಿದೆಯೇ?, ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಕಚೇರಿಯಲ್ಲಿ ನಡೆದದ್ದಕ್ಕೆ ನೀವೇ ಉತ್ತರದಾಯಿ, ತನಿಖೆಯಾಗಬೇಕಲ್ಲವೇ? ಎಂದಿದೆ.
ಸಿಎಂ ಕಚೇರಿ ನೀಡಿದ ₹2.5 ಲಕ್ಷ ಲಂಚವನ್ನು ವಾಪಸ್ ಮಾಡುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿದ್ದಾರೆ ಎಂಬುದು ತಿಳಿದು ಬಂದಿದೆ. ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ಧಕ್ಕೆ ತರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಪತ್ರಕರ್ತರಿಗೆ ಲಂಚ ನೀಡಿದ್ದೇಕೆ ಎಂಬುದನ್ನು ಸಿಎಂ ಉತ್ತರಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ:40% ಲಂಚ, ಮಂಚ ಬಿಜೆಪಿಗೆ ಸಿಕ್ಕಿರುವ ಮೂಲಭೂತ ಬಳುವಳಿ: ಡಿ ಕೆ ಶಿವಕುಮಾರ್ ವ್ಯಂಗ್ಯ