ಬೆಂಗಳೂರು:ಅಡುಗೆ ಅನಿಲ ಬೆಲೆ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ನಿಲುವುಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ಗ್ಯಾಸ್ ಬೆಲೆ ಏರಿಕೆ, ದಿನಸಿ ವಸ್ತುಗಳ ಬೆಲೆ ಏರಿಕೆ, ಲೂಟಿಕೋರ ಜಿಎಸ್ಟಿ, ಪೂರ್ವ ಸಿದ್ಧತೆ ಇಲ್ಲದ ಲಾಕ್ಡೌನ್ ಇವೆಲ್ಲವುಗಳು ಹೋಟೆಲ್ ಉದ್ಯಮದ ಒಲೆಗಳನ್ನು ಆರಿಸಿವೆ. ಈ ದುಸ್ಥಿತಿಯು ಜನತೆಯ ಆರ್ಥಿಕ ಮಟ್ಟ ಅಧೋಗತಿಗೆ ಇಳಿದಿದ್ದಕ್ಕೆ ಕನ್ನಡಿ.
ಅಚ್ಛೆ ದಿನಗಳ ಕನಸು ಬಿತ್ತಿ, ಮತಗಳ ಬೆಳೆ ಬೆಳೆದು, ಜನತೆಗೆ ಖಾಲಿ ತಟ್ಟೆ ನೀಡಿದೆ ಬಿಜೆಪಿ ಎಂದು ದೂರಿದೆ. ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ಹಾಕುವೆ ಎಂದಿದ್ದ ನರೇಂದ್ರ ಮೋದಿ ಅವರು ಈಗ ಕನಿಷ್ಠ ಕೋವಿಡ್ ಸಂತ್ರಸ್ತರಿಗೆ 4 ಲಕ್ಷ ನೀಡಲಾರೆವು ಎಂದಿದ್ದು ಅವರ "ಡೋಂಗಿ ಬಾತ್" ಬೆತ್ತಲಾಗಿಸಿದೆ.
ಆಕ್ಸಿಜನ್, ರೆಮಿಡಿಸಿವಿರ್, ಉಚಿತ ಲಸಿಕೆಗೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ನಂತರ ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡಲೂ ಸಹ ನಿರ್ದೇಶಿಸುತ್ತಿರುವುದು ಮೋದಿ ಸರ್ಕಾರದ ಹೃದಯ ಶೂನ್ಯತೆಗೆ ನಿದರ್ಶನ. ಜನರಿಂದ ಆಯ್ಕೆಗೊಂಡ ಸರ್ಕಾರದ ಕರ್ತವ್ಯದ ಪಾಠವನ್ನು ಕೋರ್ಟ್ನಿಂದ ಹೇಳಿಸಿಕೊಳ್ಳುವಂತಾಗಿದ್ದು ವಿಪರ್ಯಾಸ ಎಂದಿದೆ.