ನವದೆಹಲಿ/ಬೆಂಗಳೂರು: ಐದು ಗ್ಯಾರಂಟಿಗಳ ಜಾರಿ ಮೂಲಕ ಕರ್ನಾಟಕ ಮಾದರಿ ಅಭಿವೃದ್ಧಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಲಿದ್ದು, ಕಾಂಗ್ರೆಸ್ 20-24 ಸ್ಥಾನಗಳಲ್ಲಿ ಜಯಗಳಿಸುವ ಭರವಸೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಎಐಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ಬುಧವಾರ ಮಹತ್ವದ ಸಭೆ ನಡೆಯಿತು. ಈ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಮ್ಮ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಇನ್ನಿತರ ಎಐಸಿಸಿ ನಾಯಕರ ಜೊತೆ ಕರ್ನಾಟಕದ 30ಕ್ಕೂ ಹೆಚ್ಚು ಪಕ್ಷದ ನಾಯಕರು ಮತ್ತು ಸಚಿವರ ಸಭೆ ನಡೆದಿದೆ ಎಂದರು.
ಎರಡು ಪ್ರತ್ಯೇಕ ಸಭೆಗಳಲ್ಲಿ ಲೋಕಸಭಾ ಚುನಾವಣೆ ಹಾಗೂ ಐದು ಗ್ಯಾರಂಟಿಗಳ ಯಶಸ್ವಿ ಜಾರಿಯ ಫಲಿತಾಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಐದು ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೆ ತಲುಪಬೇಕು. ಇದರ ಯಶಸ್ಸು ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಬೇಕು ಎನ್ನುವ ಸದಾಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ 20-24 ಸ್ಥಾನ ಗೆಲ್ಲುವ ಭರವಸೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಗ್ಯಾರಂಟಿಗಳ ಸಮರ್ಪಕ ಜಾರಿ ಮತ್ತು ಲೋಕಸಭಾ ಚುನಾವಣೆಯ ಹೊಣೆ ವಹಿಸಲಾಗಿದೆ. ಇದಲ್ಲದೇ, ಹೆಚ್ಚುವರಿಯಾಗಿ ಕೆಲವು ಜಿಲ್ಲೆಗಳ ಜವಾಬ್ದಾರಿಯನ್ನೂ ಸಚಿವರಿಗೆ ನೀಡುವ ಕುರಿತು ಚರ್ಚೆ ನಡೆದಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಆರೋಪ ಪೂರ್ತಿ ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.