ಬೆಂಗಳೂರು :ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಾಲು ಸಾಲು ಸೋಲನುಭವಿಸುತ್ತಿರುವ ಕಾಂಗ್ರೆಸ್‌ಗೆ ಇದೀಗ ಒಂದೊಂದು ಗೆಲುವು ಕೂಡ ಮುಖ್ಯ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯವೆನಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಸದ್ಯವೇ ಘೋಷಣೆಯಾಗುವ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ಗೆಲುವಿಗೆ ತನ್ನದೇ ಆದ ಕಾರ್ಯತಂತ್ರ ಹೆಣೆಯುತ್ತಿದೆ.
ಹಣ, ಜಾತಿ ಹಾಗೂ ಇತರೆ ವಿವಿಧ ಪ್ರಭಾವಗಳ ಪೈಕಿ ಜಾತಿಗೆ ಕಟ್ಟು ಬೀಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿರುವುದು ಅಷ್ಟೊಂದು ಆರ್ಥಿಕ ಹಾಗೂ ಜಾತಿಯ ಬಲ ಹೊಂದಿರದ ಶಾಸಕ ದಿ. ಬಿ ನಾರಾಯಣ್ ರಾವ್ ಕುಟುಂಬಕ್ಕೆ ಟಿಕೆಟ್ ನೀಡದೆ ಇರುವ ನಿರ್ಧಾರ ಕೈಗೊಂಡಿರುವುದರಿಂದ ತಿಳಿದು ಬರುತ್ತದೆ.
ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಬೇಕು ಎಂದು ಒತ್ತಡ ಬಂದರೆ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತರೆ ಮಾತ್ರ ನಾರಾಯಣ್ ರಾವ್ ಕುಟುಂಬಕ್ಕೆ ಟಿಕೆಟ್ ಘೋಷಣೆ ಆಗಬಹುದು. ಆದರೆ, ಅಂತಹ ಪರಿಸ್ಥಿತಿ ಸದ್ಯ ಗೋಚರಿಸುತ್ತಿಲ್ಲ. ಇದರಿಂದ ಜಾತಿ ಲೆಕ್ಕಾಚಾರದ ಮೇಲೆ ನೋಡುವುದಾದ್ರೆ ಲಿಂಗಾಯಿತ ಇಲ್ಲವೇ ಮರಾಠ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬಹುದು.
ಆರ್ಥಿಕವಾಗಿ ಪ್ರಬಲವಾಗಿರುವ ಹಾಗೂ ಪ್ರಮುಖ ಲಿಂಗಾಯಿತ ನಾಯಕರಾಗಿ ಕ್ಷೇತ್ರದಲ್ಲಿ ಓಡಾಡಿ ಪರಿಚಿತರಾಗಿರುವವರು ಮಾಜಿ ಸಚಿವ ರಾಜಶೇಖರ್ ಪಾಟೀಲ್. ಇವರ ಪ್ರಭಾವದ ಮೇಲೆ ಸೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಇಲ್ಲಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಓದಿ: ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ತೈವಾನ್ ಕಂಪನಿಗಳ ಒಲವು!
ಆಕಾಂಕ್ಷಿಗಳ ಪಟ್ಟಿ :ಮೇಲೆ ಉಲ್ಲೇಖಿಸಿರುವವರ ಜೊತೆಗೆ ಮಾಜಿ ಸಿಎಂ ಧರಂಸಿಂಗ್ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆರ್ಥಿಕವಾಗಿಯೂ ಸಫಲವಾಗಿರುವ ಇವರು ತಮ್ಮ ಆಯ್ಕೆಯನ್ನೂ ಪರಿಗಣಿಸುವಂತೆ ಒತ್ತಡ ಹೇರುತ್ತಿದ್ದಾರೆ.
ಸೋದರ ಹಾಗೂ ಶಾಸಕರಾಗಿರುವ ಅಜಯ್ ಸಿಂಗ್ ಕೂಡ ಸದ್ಯ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾ, ವಿಧಾನಸಭೆ ಮುಖ್ಯ ಸಚೇತಕರಾಗಿದ್ದಾರೆ. ಇವರು ಸಹ ಸೋದರನ ಪರ ಬ್ಯಾಟ್ ಬೀಸುತ್ತಿದ್ದಾರೆ. ಅಲ್ಲದೇ ಇನ್ನೂ 15ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಪಕ್ಷ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ.
ಮರಾಠ ಸಮುದಾಯಕ್ಕೆ ಕಾಂಗ್ರೆಸ್ ಮಣೆ ಹಾಕಲು ಮುಂದಾದ್ರೆ ಜೆಡಿಎಸ್‌ನಿಂದ 1999ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಎಂ ಜಿ ಮುಳೆ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಸಾಧ್ಯತೆ ಇದೆ. 2008ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಬಿಜೆಪಿಯ ಬಸವರಾಜ ಪಾಟೀಲ್ ಅಟ್ಟೂರು ವಿರುದ್ಧ ಸೋತಿದ್ದ ಮುಳೆ 2013ರಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಬಿಎಸ್ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 18 ಸಾವಿರ ಮತ ಗಳಿಸಿ 3ನೇ ಸ್ಥಾನ ಪಡೆದಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಅವರನ್ನೂ ಸಂಪರ್ಕಿಸುತ್ತಿದ್ದು, ಅಗತ್ಯ ಬಂದರೆ ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಗೆಲುವು ಸುಲಭವಿಲ್ಲ :ಒಟ್ಟಾರೆ 1957ರಿಂದ ಈವರೆಗೆ ನಡೆದ ವಿಧಾನಸಭೆ ಚುನಾವಣೆಗಳ ಪೈಕಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಅಂದರೆ ಆರು ಸಾರಿ ಗೆಲುವು ಲಭಿಸಿದೆ. ಅಲ್ಲದೇ ಈ ಸಾರಿ ಒಂದಿಷ್ಟು ಗಂಭೀರವಾಗಿ ಪ್ರಯತ್ನ ಮಾಡಿದ್ರೆ ಮತ್ತೆ ಕ್ಷೇತ್ರ ಕೈವಶವಾಗಲಿದೆ ಎನ್ನುವ ನಿರೀಕ್ಷೆ ಇದೆ. ಆದರೆ, ಈಗಾಗಲೇ ಬಿಜೆಪಿ ಗೆಲುವಿನ ರೂವಾರಿ ಎನಿಸಿಕೊಳ್ಳುತ್ತಿರುವ ಬಿ ವೈ ವಿಜಯೇಂದ್ರ ಕ್ಷೇತ್ರವನ್ನು ಗೆಲ್ಲುವ ಯತ್ನ ಆರಂಭಿಸಿದ್ದಾರೆ.
ಸರ್ಕಾರವೂ ಹಲವು ಯೋಜನೆ ಘೋಷಿಸಿದೆ. ಲಿಂಗಾಯಿತ ಹಾಗೂ ಮರಾಠ ಮತ ಸೆಳೆಯಲು ಬಿಜೆಪಿ ನಿಗಮಗಳನ್ನೂ ಸ್ಥಾಪಿಸಿದೆ. ಇದರ ಜೊತೆ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಭಾವ ಸಾಕಷ್ಟಿದ್ದು, ಕ್ಷೇತ್ರದಲ್ಲಿ ಒಂದೆರಡು ಸಾರಿ ಪ್ರವಾಸ ಕೈಗೊಂಡ್ರೆ ಮತದಾರರು ಬಿಜೆಪಿಯತ್ತ ಸುಲಭವಾಗಿ ವಾಲುತ್ತಾರೆ ಎನ್ನುವ ಅರಿವು ಕಾಂಗ್ರೆಸ್‌ಗೆ ಇದೆ.
ಬಿಜೆಪಿಯ ಆಮಿಷ ಹಾಗೂ ಜನರ ಮನಸ್ಸಿನಲ್ಲಿರುವ ಆಡಳಿತ ಪಕ್ಷದ ಪರ ಒಲವನ್ನು ಬದಲಿಸುವ ಕಾರ್ಯ ಮಾಡಿ ಕ್ಷೇತ್ರ ಗೆದ್ದುಕೊಳ್ಳುವ ಸವಾಲು ಕಾಂಗ್ರೆಸ್ ಪಕ್ಷಕ್ಕಿದೆ. ಇದಕ್ಕಾಗಿಯೇ ಸದ್ಯ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರನ್ನು ಜೊತೆಯಲ್ಲೇ ಇಟ್ಟುಕೊಂಡು ಕ್ಷೇತ್ರದ ಉಸ್ತುವಾರಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಓಡಾಡುತ್ತಿದ್ದಾರೆ.