ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುನ್ನು ಖಂಡಿಸಿ ಜುಲೈ 12ರಂದು ರಾಜ್ಯದ ಎಲ್ಲ ಜಿಲ್ಲ ಕೇಂದ್ರ ಕಚೇರಿಗಳ ಮಹಾತ್ಮ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳ ಮುಂದೆ ಒಂದು ದಿನದ ಮೌನ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಸತ್ಯ, ನ್ಯಾಯದ ಹೋರಾಟದಲ್ಲಿ ನಾವೆಲ್ಲರೂ ಅವರ ಜೊತೆಗಿದ್ದೇವೆ ಎಂದು ಹೇಳಲು ಮೌನ ಪ್ರತಿಭಟನೆ ನಡೆಸುವುದಾಗಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ವಿವಿಧ ವೇದಿಕೆಗಳಲ್ಲಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ ಹೇಗೆ ಪ್ರಶ್ನಿಸುತ್ತಿದ್ದಾರೆ ಮತ್ತು ಬಹಿರಂಗಪಡಿಸುತ್ತಿದ್ದಾರೆ ಎಂಬುದನ್ನು ಜಗತ್ತು ನೋಡುತ್ತಿದೆ. ನಿರ್ಭೀತಿಯ ನಡವಳಿಕೆಯನ್ನು ಸಹಿಸಿಕೊಳ್ಳದ ಪ್ರಧಾನಮಂತ್ರಿಗಳು ಮತ್ತು ಬಿಜೆಪಿ, ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಕಾರಣವಾಗುವ ಎಲ್ಲ ಸೇಡಿನ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಅಡಚಣೆಗಳ ನಡುವೆಯೂ ನಮ್ಮ ನಾಯಕರು ಜನರ ಒಳಿತಿಗಾಗಿ, ನ್ಯಾಯ-ಸತ್ಯಕ್ಕಾಗಿ, ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯಲು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಅವರು ನಿರ್ಭಯದಿಂದ "ನನ್ನ ದೇಶದ ಜನರ ಧ್ವನಿಯಾಗಿ ಹೋರಾಡುತ್ತಿದ್ದೇನೆ ಅದಕ್ಕಾಗಿ ಯಾವುದೇ ತ್ಯಾಗಕ್ಕಾಗಿ ಸಿದ್ಧ" ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಸಂಸತ್ ಅನರ್ಹತೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇಡೀ ರಾಷ್ಟ್ರವೇ ಖಂಡಿಸುತ್ತಿದೆ ಎಂದು ತಿಳಿಸಿದ್ದಾರೆ.