ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ದಕ್ಷಿಣ ಪದವೀಧರ ಕ್ಷೇತದ ಚುನಾವಣೆ ಸಂಬಂಧ ಮೈಸೂರು ವಿಭಾಗದ ಪಕ್ಷದ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್, ಮೂರ್ತಿ, ಲಕ್ಷ್ಮಣ್, ಸಿ ಡಿ ಗಂಗಾಧರ್, ಜಾವಗಲ್ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು. ವಿಜಯಕುಮಾರ್, ಮರಿಸ್ವಾಮಿ ಜತೆಗಿದ್ದರು.
ದಕ್ಷಿಣ ಪದವೀಧರ, ವಾಯವ್ಯ ಪದವೀಧರ, ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಇದೇ ಬರುವ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಗೆಲುವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್, ಹೆಚ್ಚು ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಮೂಲಕ ವಿಧಾನಪರಿಷತ್‌ನಲ್ಲಿ ಕೊರತೆಯಿರುವ ಸ್ಥಾನಗಳನ್ನು ತುಂಬಿಕೊಂಡು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಯತ್ನಕ್ಕೆ ಮುಂದಾಗಿದೆ.
75 ಸದಸ್ಯರ ಬಲಾಬಲ ಇರುವ ವಿಧಾನಪರಿಷತ್ತಿನಲ್ಲಿ ಪಕ್ಷೇತರ ಸದಸ್ಯರು ಬೆಂಬಲವನ್ನು ಪಡೆದ ಬಿಜೆಪಿ ಒಟ್ಟು 33 ಸ್ಥಾನಗಳನ್ನು ಹೊಂದಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 29 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಇದೇ ಬರುವ ಡಿಸೆಂಬರ್ನಲ್ಲಿ ಹಾಗೂ ಮುಂದಿನ ವರ್ಷ ಜನವರಿಯಲ್ಲಿ ತೆರವಾಗುವ 25 ಕ್ಷೇತ್ರಗಳ ಪೈಕಿ ಹೆಚ್ಚಿನ ಕಾಂಗ್ರೆಸ್ ಸದಸ್ಯರು ತಮ್ಮ ಅವಧಿ ಪೂರ್ಣಗೊಳಿಸುತ್ತಿದ್ದಾರೆ.