ಬೆಂಗಳೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಶೀಘ್ರದಲ್ಲೇ ಕರ್ನಾಟಕದ ನೂತನ ಮುಖ್ಯಮಂತ್ರಿಯ ಹೆಸರು ಪ್ರಕಟಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಪಕ್ಷದ ನಾಯಕರು ಕೈಗೊಳ್ಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರ ತೀರ್ಪನ್ನು ನನ್ನ ತೀರ್ಪು ಆಗಿ ಮಾಡಲು ಸಾಧ್ಯವಿಲ್ಲ. ಅವರು ಈ ಮಣ್ಣಿನ ಮಗ. ನಮ್ಮ ಹಿರಿಯ ನಾಯಕರು. ಈ ವಿಚಾರದಲ್ಲಿ ಅವರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ನನಗಿದೆ" ಎಂದರು. ಇದೇ ವೇಳೆ, "ಮೊದಲ ಸಚಿವ ಸಂಪುಟ ಸಭೆಯಲ್ಲೇ ನಮ್ಮ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಲಿದ್ದೇವೆ" ಎಂದು ತಿಳಿಸಿದರು.
ಭಾನುವಾರ ತಡರಾತ್ರಿ ನಡೆದ ಸಿಎಲ್‌ಪಿ ಸಭೆ: ಮುಖ್ಯಮಂತ್ರಿ ಹೆಸರನ್ನು ಆಯ್ಕೆ ಮಾಡಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಸರ್ವಾನುಮತದಿಂದ ಅಂಗೀಕರಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ನೇಮಿಸಲು ಎಐಸಿಸಿ ಅಧ್ಯಕ್ಷರಿಗೆ ಅಧಿಕಾರವಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ತಡರಾತ್ರಿ ಆರಂಭವಾದ ಸಭೆ ಮಧ್ಯರಾತ್ರಿ 1.30ರವರೆಗೂ ನಡೆಯಿತು. ಹೊಸದಾಗಿ ಆಯ್ಕೆಯಾದ ಎಲ್ಲ 135 ಶಾಸಕರು ಭಾಗವಹಿಸಿದ್ದರು. ವೀಕ್ಷಕರಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮತ್ತು ಪಕ್ಷದ ನಾಯಕರಾದ ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತಿತರರು ಸಭೆಯಲ್ಲಿ ಇದ್ದರು.