ಬೆಂಗಳೂರು :ಕಾಂಗ್ರೆಸ್ ಪಕ್ಷವನ್ನು ಏಕೆ ಸೋಲಿಸಿದ್ವಿ ಎಂದು ಜನ ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ನ ಮತ್ತೆ ಅಧಿಕಾರಕ್ಕೆತರಬೇಕು ಎಂದು ಚರ್ಚೆ ಆರಂಭವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು 2018ರಲ್ಲಿ ಜೆಡಿಎಸ್ಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಪೂರೈಸಲಿಲ್ಲ. ನಮ್ಮ, ಜೆಡಿಎಸ್ ಶಾಸಕರನ್ನು ಹಣದ ಆಸೆ ತೋರಿಸಿ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂ. ಖರ್ಚು ಮಾಡಿದ್ರು. ಒಬ್ಬ ಎಂಎಲ್ಎಗೆ 20-25 ಕೋಟಿ ಖರ್ಚು ಮಾಡಿದ್ರು. ಇದರಿಂದ ನಾವು ತಡೆಯಲು ಆಗಲಿಲ್ಲ, ಆಪರೇಷನ್ ಕಮಲ ಅಂತಾ ಹೆಸರು ಬಂದಿದ್ದು ಶ್ರೀಮಾನ್ ಯಡಿಯೂರಪ್ಪ ಅವರಿಂದ.
ಅದು 2008ರಲ್ಲಿ, ಆಗ ಅವರಿಗೆ ಬಹುಮತ ಇರಲಿಲ್ಲ. ಆ ನಂತರ ಎಲೆಕ್ಷನ್ಗೆ ಹೋಗಿ ಅಲ್ಲಿ ಕೋಟಿ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ್ರು. ನಂತರ ಇದೀಗ ಕೂಡ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಹಿಂದೆಲ್ಲಾ ಶಾಸಕರ ಖರೀದಿ ನಡೆಯುತ್ತಿತ್ತು. ಆದರೆ, ಈಗ ಕೇವಲ ಆಪರೇಷನ್ ಕಮಲ ನಡೆಯುತ್ತಿದೆ. ಹಣ ಬಲದ ಮೇಲೆ ಸರ್ಕಾರ ರಚನೆ ಆಗುವುದನ್ನು ತಡೆಯಲು ನಾವು ಸಾಕಷ್ಟು ಪ್ರಯತ್ನ ನಡೆಸಿದೆವು. ಆದರೆ, ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ಮುಖ್ಯಮಂತ್ರಿಗಳ ಕುಟುಂಬದವರಿಂದ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಆರ್ಟಿಜಿಎಸ್ ಮೂಲಕ ಹಣ ತೆಗೆದುಕೊಂಡಿದ್ದು ವರದಿಯಲ್ಲಿ ಸಾಬೀತಾಗಿದೆ. ಆಡಿಯೋದಲ್ಲಿ ಹಣ ತಗೊಂಡಿರುವುದಕ್ಕೆ ಸಾಕ್ಷಿ ಇದೆ. ನಿನ್ನೆ ಇದೇ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತಿದ್ದೆ. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡೋಕೆ ಸವಾಲು ಹಾಕಿದ್ದೆ. ಆದರೆ, ಸರ್ಕಾರ ತನಿಖೆಗೆ ಒಪ್ಪುತ್ತಿಲ್ಲ. ತಪ್ಪುಮುಚ್ಚಿಕೊಳ್ಳಲು ಭಂಡತನ ತೋರಿಸ್ತಾರೆ. ತನಿಖೆ ನಡೆದ್ರೆ ಯಡಿಯೂರಪ್ಪ ಕುಟುಂಬದವರು ಜೈಲಿಗೆ ಹೋಗ್ತಾರೆ. ನಾನು ಈ ಭ್ರಷ್ಟಾಚಾರ ಪ್ರಕರಣ ಇಲ್ಲಿಗೆ ಬಿಡೋದಿಲ್ಲ. ಇದರ ಬಗ್ಗೆ ನಾನು ಮತ್ತು ಕಾಂಗ್ರೆಸ್‌ನವರೆಲ್ಲ ಸೇರಿಯೇ ಧ್ವನಿ ಎತ್ತುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ನಾಳೆ ಇರುವ ಬಂದ್ಗೆ ಸಂಪೂರ್ಣ ಬೆಂಬಲ ನೀಡುತ್ತೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಯನ್ನು ನಾವು ಸಂಪೂರ್ಣ ಖಂಡಿಸುತ್ತೇವೆ. ನಿನ್ನೆ ಸಹ ಮೇಲ್ಮನೆಯಲ್ಲಿ ಒಳ್ಳೆ ಕೆಲಸ ಮಾಡಿದ್ರು, ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ ಒಪ್ಪಿಗೆ ಸಿಗುವಂತೆ ಮಾಡಿಲ್ಲ ಎಂದರು. ಸುರ್ಜೇವಾಲಾ ರಾಜ್ಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 2ನೇ ಬಾರಿಗೆ ಕರ್ನಾಟಕಕ್ಕೆ ಬರ್ತಿದ್ದಾರೆ. ಈ ಸಮಯದಲ್ಲಿ ಸಿಎಂ ಯಡಿಯೂರಪ್ಪ ಮಗನ ಮೇಲೆ ಭ್ರಷ್ಟಾಚಾರ ಆರೋಪ ಬಂದಿದೆ. 17 ಕೋಟಿ ರೂ. ಲಂಚ ಪಡೆದಿದ್ದಾರೆ ಅನ್ನೋ ಆರೋಪವಿದೆ.
ಅದು ಆರ್ಟಿಜಿಎಸ್ ಮೂಲಕ ತೆಗೆದುಕೊಂಡಿದ್ದಾರೆ. ಇವತ್ತು ಪಕ್ಷದ ಮುಖಂಡರೆಲ್ಲಾ ಹೇಳ್ತಾಯಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ. ನನಗೂ ಹಾಗೇ ಅನಿಸ್ತಿದೆ. ಯಾಕೆಂದರೆ, ಬಿಜೆಪಿ ಸರ್ಕಾರ ಜನಪರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಜನರು ಈಗ ಮಾತನಾಡಿಕೊಳ್ತಿದ್ದಾರೆ. ಕಾಂಗ್ರೆಸ್ ಪಕ್ಷ ಚೆನ್ನಾಗಿ ಆಡಳಿತ ಮಾಡುತ್ತಿತ್ತು ಎಂದು.. ಹಾಗಾಗಿ, ಮುಂದೆ ನಾವು ಅಧಿಕಾರಕ್ಕೆ ಬರ್ತೇವೆ ಎಂದರು. ಕೊರೊನಾ ರೋಗ ಬಂದಿರೋ ಸಮಯದಲ್ಲಿ ಲೂಟಿ ಮಾಡಿದ್ದಾರೆ.
ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಡಿಜೆ ಹಳ್ಳಿ ಮತ್ತು ಕೆಜಿ ಗಲಭೆ ಪ್ರಕರಣ ನವೀನ್ ಎಂಬ ಯುವಕನಿಂದ ಆದ ತಪ್ಪು, ಅವನ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ರೆ ಗಲಾಟೆ ಆಗ್ತಾಯಿರಲಿಲ್ಲ. ಗಲಭೆ ನಿಯಂತ್ರಣ ಮಾಡುವಲ್ಲಿ ಪೊಲೀಸರು ಸೋತ್ರು. ಗಲಭೆ ವಿಚಾರ ಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾಗಿದೆ ಎಂದರು. ಆರ್ಥಿಕವಾಗಿ ರಾಜ್ಯ ದಿವಾಳಿ ಆಗ್ತಿದೆ. ಬಿಜೆಪಿಯವರು ಶಂಡರು. ಕೇಂದ್ರ ಸರ್ಕಾರದ ಬಳಿ ಹೋಗಿ ಹಣ ಕೇಳುವ ಧೈರ್ಯ ಇಲ್ಲ.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಅನುದಾನ ಪಡೆಯೋಕೆ ಆಗಿಲ್ಲ. ಜಿಎಸ್ಟಿ ಲಾಸ್ ತುಂಬಲು ಕರ್ನಾಟಕಕ್ಕೆ 4900 ಕೋಟಿ ರೂ. ಸ್ಪೆಷಲ್ ಗ್ರ್ಯಾಂಟ್ಸ್ ಕೊಡಲು 15ನೇ ಫೈನಾನ್ಸ್ ಕಮಿಷನ್ ಶಿಫಾರಸು ಮಾಡಿದೆ. ಶಿಫಾರಸು ಮಾಡಿರುವ ಹಣವನ್ನೇ ರಾಜ್ಯ ಬಿಜೆಪಿ ಸರ್ಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕೇಂದ್ರದ ಬಳಿ ಹೋಗಿ ಕೇಳೋಕೆ ಇವರಿಗೆ ಬಾಯಿ ಇಲ್ಲ. ರಾಜ್ಯ ಸರ್ಕಾರದ ಸಾಲ 4 ಲಕ್ಷ ಕೋಟಿ ದಾಟಲಿದೆ. ವರ್ಷಕ್ಕೆ 23 ಸಾವಿರ ಕೋಟಿ ಹಣ ಬಡ್ಡಿ ಕಟ್ಟುತ್ತಿದ್ದೇವೆ. ಅಭಿವೃದ್ದಿ ಕಾರ್ಯಗಳು ಹೇಗೆ ಆಗುತ್ತೆ ಎಂದು ಪ್ರಶ್ನಿಸಿದರು.