ಬೆಂಗಳೂರು :ಲೋಕಸಭೆಗೆ ಸ್ಪರ್ಧಿಸುವ 18 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷ ಇಂದಿನಿಂದಲೇ ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಣೆ ಮಾಡಲು ಆರಂಭಿಸಿದೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನ ಹತ್ತಿರವಾಗುತ್ತಿರುವ ಕಾರಣ, ಇವತ್ತು ಭಾನುವಾರವಾದರೂ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭ್ಯರ್ಥಿಗಳಿಗೆ ಬಿ- ಫಾರಂ ವಿತರಿಸುತ್ತಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಬೀದರ್ ಅಭ್ಯರ್ಥಿ ಈಶ್ವರ್ ಖಂಡ್ರೇ ಬಿ- ಫಾರಂ ಸ್ವೀಕರಿಸಿದರು.
ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಬಿ-ಫಾರಂ ಪಡೆದರು. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ರೋಷನ್ ಬೇಗ್ಆಕಾಂಕ್ಷಿಗಳಾಗಿದ್ದರು. ಆದರೆ,ಅವರನ್ನೆಲ್ಲ ಹಿಂದಿಕ್ಕಿ ಟಿಕೆಟ್ ಪಡೆಯುವಲ್ಲಿ ರಿಜ್ವಾನ್ ಅರ್ಷದ್ ಯಶಸ್ಸು ಕಂಡಿದ್ದಾರೆ.
ಬಿ-ಫಾರಂ ಪಡೆದ ನಂತರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಾತನಾಡಿ, ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಪ್ರಕಾಶ್ ರೈ ಸ್ಪರ್ಧೆ ನನ್ನ ಮೇಲೆ ಪರಿಣಾಮ ಆಗಲ್ಲ. ಬೆಂಗಳೂರು ಕೇಂದ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಕ್ಷೇತ್ರಕ್ಕೆ ಕೊಡುಗೆ ಏನೂ ಇಲ್ಲ. ನಮ್ಮದು ಬಿಜೆಪಿ ವಿರುದ್ಧದ ನೇರ ಸ್ಪರ್ಧೆ. ಕಳೆದ ಐದು ವರ್ಷ ನಾನು ಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡಿದ್ದೇನೆ. ಕ್ಷೇತ್ರಕ್ಕೆ ಡೈನಾಮಿಕ್ ಎಂಪಿ ಬೇಕು. ನನಗೆ ನಿಶ್ಚಿತವಾಗಿಯೂ ಗೆಲ್ಲೋ ವಿಶ್ವಾಸ ಇದೆ. ನಾಳೆ ಒಂದು ಗಂಟೆಗೆ ನಾಮಪತ್ರ ಸಲ್ಲಿಕೆಮಾಡುತ್ತೇನೆ. ರೋಷನ್ ಬೇಗ್ ಕೂಡಾ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ನನಗೆ ಈಗ ಟಿಕೆಟ್ ಸಿಕ್ಕಿದ್ದರೂ ಬೇಗ್ಅವರ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಅವರ ವಿಶ್ವಾಸ ಪಡೆದುಕೊಂಡು ಚುನಾವಣಾ ಪ್ರಚಾರ ಮಾಡುತ್ತೇನೆ. ದೇವೇಗೌಡರು ಎಲ್ಲಿ ನಿಂತರೂ ಅವರ ಬೆಂಬಲ ನಮಗೆ ಇದೆ. ದೇವೇಗೌಡರ ಆಶೀರ್ವಾದವನ್ನೂ ಪಡೆದುಕೊಳ್ಳುತ್ತೇನೆ ಎಂದರು.