ಕರ್ನಾಟಕ

karnataka

By

Published : Jul 11, 2020, 3:50 PM IST

ETV Bharat / state

'ಲೆಕ್ಕ ಕೊಡಿ ಅಭಿಯಾನ ಬಿಟ್ಟು ಕಾಂಗ್ರೆಸ್ ಕೊರೊನಾ ನಿಯಂತ್ರಿಸಲು ಕೈ ಜೋಡಿಸಲಿ'

ಕಾಂಗ್ರೆಸ್​ ಪಕ್ಷದವರು ಲೆಕ್ಕ ಕೊಡಿ ಎಂದು ಸರ್ಕಾರವನ್ನು ಕೇಳುವ ಬದಲು, ಜನರ ಬಳಿ ಹೋಗಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಿ ಎಂದು ಸಚಿವ ಬಿ.ಸಿ.ಪಾಟೀಲ್​​ ವಾಗ್ದಾಳಿ ನಡೆಸಿದ್ದಾರೆ.

Minister BC Patel
ಬಿ.ಸಿ.ಪಾಟೀಲ್​ ಸುದ್ದಿಗೋಷ್ಠಿ

ಬೆಂಗಳೂರು: ಲೆಕ್ಕ ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ, ಲೆಕ್ಕ ಕೊಡದೇ ನಾವು ಎಲ್ಲೂ ಹೋಗುವುದಿಲ್ಲ. ಲೆಕ್ಕ ಕೊಡಿ ಎಂಬ ಅಭಿಯಾನ ಬಿಟ್ಟು, ಸರ್ಕಾರದ ಜೊತೆಗೆ ಕಾಂಗ್ರೆಸ್​​ ನಿಲ್ಲಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಬಿ.ಸಿ.ಪಾಟೀಲ್​ ಸುದ್ದಿಗೋಷ್ಠಿ

ಕೋವಿಡ್ -19 ಉಪಕರಣ ಖರೀದಿಯಲ್ಲಿ ಸುಮಾರು 2,000 ಕೋಟಿ ರೂ. ಹಗರಣವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ. ಈ‌ ಸಂಬಂಧ ಮೊನ್ನೆ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಈ ವೇಳೆ ಸಿಎಂ ಅವರೇ ಕೇವಲ 500-600 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಪರಿಕರಗಳನ್ನು ಖರೀದಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಹೀಗಿದ್ದಾಗ 2,000 ಕೋಟಿ ರೂ.‌ಹಗರಣ ಎಲ್ಲಿಂದ ಬಂತು?. ಇದು ಸುಳ್ಳು ಆರೋಪ ಎಂದರು.

ಕೊರೊನಾ ಜಾಸ್ತಿಯಾಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಅ​ನ್ನು ಕೊರೊನಾ ಕಾಂಗ್ರೆಸ್ ಅಂತ ಕರೆಯುವುದು ಸೂಕ್ತ. ರಾಜ್ಯದಲ್ಲಿ ಈ ತಬ್ಲಿಘಿಗಳಿಂದ ಕೊರೊನಾ ಜಾಸ್ತಿ ಆಗಿರುವುದು. ತಬ್ಲಿಘಿಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ಮಾಡಿತ್ತು. ಕಾಂಗ್ರೆಸ್​​ನವರ ಕುಮ್ಮಕ್ಕಿನಿಂದಲೇ ಕೊರೊನಾ ಈ ಮಟ್ಟದಲ್ಲಿ ಜಾಸ್ತಿ ಆಗಲು ಕಾರಣವಾಗಿದೆ ಎಂದು ಪಾಟೀಲ್ ಹೇಳಿದರು.

ಆನ್​​ಲೈನ್‌ನಲ್ಲಿ ಪರೀಕ್ಷೆ:

ಕೃಷಿ ವಿವಿಯಿಂದ ಮಾಡಬೇಕಾಗಿದ್ದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಎಂ.ಎಸ್ಸಿ(ಅಗ್ರಿಕಲ್ಚರ್) ಮತ್ತು ಎಂ.ಎಸ್ಸಿ (ಜಿಯೋಲಾಜಿ) ಪರೀಕ್ಷೆ ಆನ್‌ಲೈನ್‌ನಲ್ಲಿ ಮಾಡಲು ನಿರ್ಧರಿಸಲಾಗಿದೆ. ಆಗಸ್ಟ್‌ ತಿಂಗಳ ನಂತರ ಈ ಪರೀಕ್ಷೆ ನಡೆಯಲಿದೆ. ಮುಂದಿನ ವರ್ಷದ ದಾಖಲಾತಿ ಸಿಇಟಿ ಬರೆದ ಬಳಿಕ ನಿರ್ಧಾರವಾಗುವುದು ಎಂದು ವಿವರಿಸಿದರು.

ಲಾಕ್‌ಡೌನ್ ಪರಿಹಾರ ಅಲ್ಲ:

ಕೊರೊನಾ ಜೊತೆ ಜೀವಿಸುವುದನ್ನು ನಾವು ಕಲಿಯಬೇಕು. ಲಾಕ್‌ಡೌನ್ ಮಾಡುವುದು ಕೊರೊನಾ ನಿಯಂತ್ರಣಕ್ಕೆ ದಾರಿಯಲ್ಲ ಎಂದು ಇದೇ ವೇಳೆ‌ ಸ್ಪಷ್ಟಪಡಿಸಿದರು.

ವಾರದಲ್ಲಿ ಎರಡೆರಡು ದಿನ ಲಾಕ್‌ಡೌನ್ ಮಾಡುವುದು ಪರಿಹಾರವಲ್ಲ, ಈಗ ಭಾನುವಾರ ಮಾತ್ರ ಲಾಕ್‌ಡೌನ್ ಮಾಡುತ್ತಿರುವುದು ಸರಿಯಿದೆ. ಗ್ರಾಮೀಣ ಭಾಗದಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗರು ಜಾಗೃತರಾಗಿದ್ದಾರೆ. ಅಲ್ಲಿಯೂ ಕೂಡ ಸಾಮಾಜಿಕ ಅಂತರ, ಸ್ಯಾನಿಟೈಸರ್ ಉಪಯೋಗ, ಮಾಸ್ಕ್ ಬಳಕೆ ಎಲ್ಲವೂ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ABOUT THE AUTHOR

...view details