ಬೆಂಗಳೂರು: ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ಸಮರೋಪಾದಿಯಲ್ಲಿ ನೆರವಿನ ಕಾರ್ಯ ಮಾಡುವುದನ್ನು ಬಿಟ್ಟು ರಾಜ್ಯ ಬಿಜೆಪಿ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯ ಸಂಕಷ್ಟಕ್ಕೆ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.
'ಕೈಗೊಂಬೆ ಸಿಎಂ' ಎಂದು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ 'ಕತ್ತಿ ವರಸೆ' ಶುರುವಾಗಿದೆ ಎಂದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು?, ನಿಮ್ಮ ಆಡಳಿತ ವೈಫಲ್ಯವೇ? ಅಥವಾ ಬಿಜೆಪಿ ವರ್ಸಸ್ ಬಿಜೆಪಿ ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ? ಎಂದು ಪ್ರಶ್ನಿಸಿದೆ.
ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ:ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ. ಶೇ.40ರಷ್ಟು ಕಮಿಷನ್ ಸರ್ಕಾರದಲ್ಲಿ '3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ!. ಕೈಗೊಂಬೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಗೇಲಿ ಮಾಡಿದೆ.
ಕ್ವಿಟ್ ಇಂಡಿಯಾ ದಿನ ಆಚರಿಸಲಿಲ್ಲ:ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರು ಇಂದು ಕ್ವಿಟ್ ಇಂಡಿಯಾ ದಿನಾಚರಣೆ ಆಚರಿಸಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್, 'ಹರ್ ಘರ್ ತಿರಂಗಾ' ಎನ್ನುತ್ತಾ ಜನರ ಮನೆಯ ಮೇಲೆ ತಿರಂಗಾ ಹಾರಿಸಲು ಕರೆ ಕೊಟ್ಟಿರುವ ಪ್ರಧಾನಿ, ತಮ್ಮ ಮೂಲ ಮನೆಯಾದ ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲೇ ತಿರಂಗಾ ಹಾರಿಸಲು ಸಾಧ್ಯವಾಗಲಿಲ್ಲ. ಅವರ ರಾಜ್ಯ ಬಿಜೆಪಿಯಲ್ಲಿ ಕ್ವಿಟ್ ಇಂಡಿಯಾ ದಿನ ಆಚರಿಸಲಿಲ್ಲ. ಆರ್ಎಸ್ಎಸ್ ಹಾಗೂ ಬಿಜೆಪಿಯ ರಾಷ್ಟ್ರವಾಧಿಗಳಲ್ಲ, ರಾಷ್ಟ್ರವ್ಯಾಧಿಗಳು ಎಂಬುದು ಅನಾವರಣವಾಗಿದೆ ಎಂದು ದೂರಿದೆ.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್