ಬೆಂಗಳೂರು: ರಾಜ್ಯದ ಪಾಲಿನ ಜಿಎಸ್ಟಿ ಪಾಲನ್ನು ಕೇಳುವಂತೆ ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರು ತೀವ್ರ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದು, ರಾಜ್ಯದ ಜಿಎಸ್ಟಿ ಪಾಲು ನಮ್ಮ ರಾಜ್ಯದ ಹಕ್ಕು. ಕೇಂದ್ರ ಸರ್ಕಾರ ಕೊಡುವ ಭಿಕ್ಷೆ ಅಲ್ಲ. ನಮ್ಮ ಪಾಲಿನ ಹಣವನ್ನು ನಾವು ಕೇಳಿದರೆ ರಿಸರ್ವ್ ಬ್ಯಾಂಕ್ ಬಳಿ ಸಾಲ ಕೇಳಿ ಅಂತಿದೆ ನರೇಂದ್ರ ಮೋದಿ ಸರ್ಕಾರ. ಕರ್ನಾಟಕದಿಂದ ಆಯ್ಕೆಯಾದ 25 ಬಿಜೆಪಿ ಸಂಸದರೇ ಈಗ ಎಲ್ಲಿದ್ದೀರಿ? ಅಂಜುಬುರುಕತನ ಬಿಟ್ಟು ಕನಿಷ್ಠ ಪ್ರಧಾನಿ ಬಳಿ ಮಾತನಾಡಿ ನಮ್ಮ ಪಾಲಿನ ತೆರಿಗೆ ಹಣ ಕೊಡಿಸಿ ನ್ಯಾಯ ಒದಗಿಸುವಿರಾ? ಉತ್ತರಿಸಿ ಎಂದು ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿ ನಾಯಕರೇ ನಿಮ್ಮ ಮೋದಿ ಸರ್ಕಾರ ರಾಜ್ಯದ ಜಿಎಸ್ಟಿ ಪಾಲು ಬಾಕಿ ಉಳಿಸಿಕೊಂಡ ಪರಿಣಾಮವಿದು. ಮುಂದೊಂದು ದಿನ ಇಡೀ ರಾಜ್ಯವನ್ನೇ ಹರಾಜಿಗಿಡಬೇಕಾದಿತು ಎಚ್ಚರ!! ಹೋಗಿ ಈಗಲಾದರೂ ಮೋದಿಯವರ ಎದುರು ಗಂಡೆದೆ ಪ್ರದರ್ಶಿಸಿ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ತನ್ನಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲನ್ನು ಕೇಳುವ ಧೈರ್ಯವಿಲ್ಲದ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಸಂಪನ್ಮೂಲ ಹರಾಜು ಹಾಕುವ ಹೀನಾಯ ಸ್ಥಿತಿ ತಲುಪಿದೆ. ಒಂದೆಡೆ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಹರಾಜು ಹಾಕುತ್ತಿದ್ದರೆ, ಇದೀಗ ರಾಜ್ಯ ಸರ್ಕಾರವೂ ಅದೇ ಹಾದಿ ಹಿಡಿದಿರುವುದು ಶೋಚನೀಯ ಎಂದು ಕಾಂಗ್ರೆಸ್ ಪಕ್ಷ ಅಸಮಧಾನ ವ್ಯಕ್ತಪಡಿಸಿದೆ.